ದಶಕದ ವೈಚಾರಿಕ ಸಾಹಿತ್ಯ: ಒಂದು ಅವಲೋಕನ – ಆಶಯ

ದಶಕದ ವೈಚಾರಿಕ ಸಾಹಿತ್ಯ: ಒಂದು ಅವಲೋಕನ

ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ರಚನೆಯಲ್ಲಿ ಸಾಮಾಜಿಕ ಬದ್ಧತೆಯ ಪ್ರಶ್ನೆ ಹಿನ್ನೆಲೆಗೆ ಸರಿಯುತ್ತಿರುವುದನ್ನು ಗಮನಿಸಬಹುದಾಗಿದೆ. ಸಾಹಿತ್ಯ-ಸಾಂಸ್ಕೃತಿಕ ರಂಗದಲ್ಲಿ ಪ್ರಬಲ ಸೈದ್ಧಾಂತಿಕ ಚಳುವಳಿಯ ಗೈರು ಹಾಜರಿಯಿಂದಾಗಿ ಆಗುತ್ತಿರುವ ಕಂದಕವನ್ನು ಸರಿಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸಾಮಾಜಿಕ ಪ್ರಜ್ಞೆಯ ನಿರ್ವಾತವನ್ನು ತುಂಬುವ ದೃಷ್ಟಿಯಿಂದ ಸಮುದಾಯ ಮತ್ತೊಮ್ಮೆ ಕ್ರಿಯಾಶೀಲವಾಗುತ್ತಿದೆ.

Dashakada Vycharika Sahitya - Invitation Final Jan 21

ಈ ಹಿನ್ನೆಲೆಯಿಂದ ಕಳೆದ ವರ್ಷದಿಂದ ಸಮುದಾಯ ಸಾಹಿತ್ಯ-ಸಾಂಸ್ಕೃತಿಕ ವಲಯದಲ್ಲಿ ಆಗುತ್ತಿರುವ ಒಂದು ದಶಕದ ಬೆಳವಣಿಗೆಯನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸಿ ಒಂದು ಸೈದ್ಧಾಂತಿಕ ಕಣ್ಣೋಟ ನೀಡುವ ದೃಷ್ಟಿಯಿಂದ ದಶಕದ ಸಾಹಿತ್ಯದ ಕುರಿತು (ಕತೆ, ಕವನ, ಕಾದಂಬರಿ, ವಿಮಶರ್ೆ ಮತ್ತು ವೈಚಾರಿಕ ಸಾಹಿತ್ಯ) ವಿಚಾರ ಸಂಕಿರಣ ಹಮ್ಮಿಕೊಳ್ಳುತ್ತಿದೆ. ದಶಕದ ಸಾಹಿತ್ಯ-ಕಥಾ ಸಾಹಿತ್ಯದ ಕುರಿತು ಗುಲ್ಬರ್ಗದಲ್ಲಿ ಒಂದು ದಿನದ ವಿಚಾರ ಸಂಕಿರಣ ಮತ್ತು ಹೈದ್ರಾಬಾದ್ ಕರ್ನಾಟಕದ ಲೇಖಕರ ಸಮಾವೇಶವನ್ನು ನಡೆಸಿದೆ.

ಮುಂದಿನ ಯೋಜನೆಯ ಭಾಗವಾಗಿ ಮಂಗಳೂರಿನಲ್ಲಿ ‘ದಶಕದ ವೈಚಾರಿಕ ಸಾಹಿತ್ಯ’ ಕುರಿತು ಒಂದು ದಿನದ ವಿಚಾರ ಸಂಕಿರಣ ಮತ್ತು  ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಚಿಕ್ಕಮಗಳೂರನ್ನು ಒಳಗೊಂಡಂತೆ ಲೇಖಕರ ಸಮಾವೇಶ ನಡೆಸಲು ಆಶಿಸಿದೆ.

ಸ್ವಾಂತಂತ್ರ್ಯದ ದಿನಗಳಿಂದಲೂ ದಕ್ಷಿಣ ಕನ್ನಡ ವೈಚಾರಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಆದರೆ ಇತ್ತೀಚೆಗೆ ಕೋಮುವಾದ, ಜಾತಿವಾದ, ಮೂಲಭೂತವಾದ, ಕಂದಾಚಾರಗಳ ಕೇಂದ್ರ ಆಗುತ್ತಿರುವ ಹಿನ್ನೆಲೆಯಲ್ಲಿ ಒಂದು ದಶಕದ ಬೆಳವಣಿಗೆಯ ಕುರಿತು ಅಲ್ಲಿ ವಿಚಾರ ಸಂಕಿರಣ ಮಾಡುವ ಮೂಲಕ ಆ ಭಾಗದ ವೈಚಾರಿಕ ಮನಸ್ಸನ್ನು ಒಟ್ಟು ಸೇರಿಸುವ ಮತ್ತು ಉದಾರೀಕೃತ ವೈಚಾರಿಕತೆಗೆ ಸ್ಪಷ್ಟ ಕಣ್ಣೋಟ ನೀಡುವ ಅಗತ್ಯವಿದೆ.

ನಮ್ಮ ಸಾಮೂಹಿಕ ಸಂಘಟನೆಗಳ ಹೋರಾಟಗಳು ಮತ್ತು ಇತರೇ ಸಾಹಿತ್ಯ-ಸಾಂಸ್ಕೃತಿಕ ಮನಸ್ಸುಗಳ ನಡುವೆ ಒಂದು ಕಂದಕ ಏರ್ಪಟ್ಟಿರುವ ಒಂದು ಅಪಾಯಕಾರಿಯಾದ ಮತ್ತು ಅನಪೇಕ್ಷಣೀಯವೂ ಆದ ಬೆಳವಣಿಗೆ. ಇದನ್ನು ಬದಲಾಯಿಸಿ ಪ್ರಗತಿಪರ ಪ್ರಜಾಸತ್ತಾತ್ಮಕ ಆಲೋಚನೆಗಳ ನಡುವೆ ಒಂದು ಸಮನ್ವಯ ಸಾಧಿಸಬೇಕಾಗಿದೆ. ಅದು ನಮ್ಮ ಬೆಳವಣಿಗೆಗೆ ಅತ್ಯವಶ್ಯ ಕೂಡ.

ಇದು ಒಂದು ದಿನದ ವಿಚಾರ ಸಂಕಿರಣವಾಗಿದ್ದು ಹೆಚ್ಚೆಚ್ಚು ಸಂವಾದಕ್ಕೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಮೂರು ವಿಷಯವನ್ನು ಮಾತ್ರ ಚರ್ಚೆಗೆ ಇಟ್ಟುಕೊಳ್ಳಲಾಗಿದೆ. ಮೊದಲು ಇಬ್ಬರು 15 ನಿಮಿಷಗಳ ಕಾಲ ವಿಷಯದ ಬಗ್ಗೆ ಟಿಪ್ಪಣಿ ಮಂಡಿಸಿ ಪ್ರಸ್ತಾವನೆ ಮಾಡುತ್ತಾರೆ. ನಂತರ 45 ಮಿನಿಷಗಳ ಸಂವಾದ, ನಂತರ ಸಮನ್ವಯಕಾರರು ಚರ್ಚೆಯನ್ನು ಕ್ರೋಢಿಕರಿಸುವುದರೊಂದಿಗೆ ತಮ್ಮ ಅಭಿಪ್ರಾಯವನ್ನು 30 ನಿಮಿಷಗಳ ಕಾಲ ಮಂಡಿಸುತ್ತಾರೆ. ಪ್ರತಿ ಗೋಷ್ಟಿಯ ವ್ಯಾಪ್ತಿ ಮತ್ತು ಆಶಯದ ಬಗ್ಗೆ ಒಂದು ಸಣ್ಣ ಟಿಪ್ಪಣಯನ್ನು ಕೊನೆಯಲ್ಲಿ ಕೊಡಲಾಗಿದೆ.

ಚರ್ಚೆಯ ವ್ಯಾಪ್ತಿ ಕಳೆದ ದಶಕದ (2000-2013) ವೈಚಾರಿಕ ಸಾಹಿತ್ಯವನ್ನು (ವಿಚಾರ ಸಾಹಿತ್ಯದ ಮುದ್ರಿತ ಪುಸ್ತಕ ಅಥವಾ ಪ್ರಕಟಿತ ಅಂಕಣ, ಲೇಖನ ಇತ್ಯಾದಿಗಳನ್ನು ಒಳಗೊಂಡಂತೆ) ಒಳಗೊಂಡಿರಬೇಕೆಂಬುದು ನಮ್ಮ ಅಪೇಕ್ಷೆ.

ಗೋಷ್ಟಿಯ ಆಶಯ

ಗೋಷ್ಟಿ 1: ದಶಕದ ವೈಚಾರಿಕ ಸಾಹಿತ್ಯ: ಸಮಾಜ ಮತ್ತು ಸಂಸ್ಕೃತಿಯ ನಿರ್ವಚನೆಯ ಸ್ವರೂಪಗಳು

    ಕರ್ನಾಟಕದ ಸಮಾಜ ಮತ್ತು ಸಂಸ್ಕೃತಿಗಳ ನಿರ್ವಚನೆ ಮತ್ತು ವಿಶ್ಲೇಷಣೆಗಳನ್ನು ರೂಪಿಸುವಲ್ಲಿ ಪ್ರಮುಖ ವಾದಗಳಾದ ಗಾಂಧಿವಾದ/ಲೋಹಿಯಾವಾದ, ಅಂಬೇಡ್ಕರವಾದ ಮತ್ತು ಮಾರ್ಕ್ಸ್ ವಾದ ಹಲವು ದಶಕಗಳಿಂದ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಇವಲ್ಲದೆ ಪರಿಸರವಾದ, ದೇಸಿವಾದ, ಸ್ತ್ರೀವಾದ ಮತ್ತು ವಸಾಹತೋತ್ತರ ಚಿಂತನೆಗಳೂ ಕ್ರಮೇಣ ಮುನ್ನೆಲೆಗೆ ಬಂದಿವೆ. ಕಳೆದ ದಶಕದ ವಿವಾದಾತ್ಮಕ ಹೊಸ ಸೇರ್ಪಡೆ ಬಹುಶಃ ಪ್ರೊ. ಬಾಲಗಂಗಾಧರ ಅವರ ‘ಪೂವರ್ಾವಲೋಕನ’ ಅಥವಾ ‘ಪ್ರತ್ಯಭಿಜ್ಞಾನ’ದ ‘ಸಂಸ್ಕೃತಿ ಚಿಂತನೆ’.

    ಕಳೆದ ದಶಕದಲ್ಲ್ಲೂ ಹಿಂದೇ ಹೇಳಿದ ವಾದಗಳೆಲ್ಲವೂ ಸಕ್ರಿಯವಾಗಿದ್ದು, ಅವು ಕರ್ನಾಟಕದ ಸಮಾಜ ಮತ್ತು ಸಂಸ್ಕೃತಿಗಳ ವಿಶ್ಲೇಷಣೆಯಲ್ಲಿ ಎಷ್ಟರ ಮಟ್ಟಿಗೆ ಮುನ್ನಡೆ ಸಾಧಿಸಿವೆ ? ಈ ವಾದಗಳ ನಡುವೆ ಸಂಘರ್ಷ-ಸಂಕರ ಎಷ್ಟರ ಮಟ್ಟಿಗೆ ಆಗಿದೆ ? ಕರ್ನಾಟಕದ ಸಮಾಜ ಮತ್ತು ಸಂಸ್ಕೃತಿಗಳನ್ನು ಬಾಧಿಸುತ್ತಿರುವ ಕಳೆದ ಎರಡು ದಶಕಗಳ ಪ್ರಮುಖ ವಿದ್ಯಮಾನಗಳಾದ ಸಾಮ್ರಾಜ್ಯಶಾಹಿ ಜಾಗತೀಕರಣ ಮತ್ತು ಕೋಮುವಾದಿ ಫ್ಯಾಸಿಸಂಗಳ ಜತೆ ಮುಖಾಮುಖಿಯಲ್ಲಿ ಅವು ಯಾವ ಪಾತ್ರ ವಹಿಸಿವೆ ? ಕಳೆದ ದಶಕದಲ್ಲಿ ಇವೆರಡರ ವಿರುದ್ಧ ಆರಂಭವಾದ ಪ್ರತಿರೋಧದಲ್ಲಿ ಅವು ಯಾವ ಪಾತ್ರ ವಹಿಸಿವೆ ? ಕಳೆದ ದಶಕದಲ್ಲಿ ಪ್ರಕಟಿತ ವೈಚಾರಿಕ ಸಾಹಿತ್ಯವನ್ನು ಮುಂದಿಟ್ಟುಕೊಂಡು ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳಬೇಕಾಗಿದೆ. ಕೆಲವು ಪ್ರಮುಖ ಸಾರ್ವಜನಿಕ ವಾಗ್ವಾದಗಳಾದ – ಮಡೆಸ್ನಾನ-ಐಪಿಎಲ್ ಹರಾಜು, ವಚನಗಳಲ್ಲಿ ಜಾತಿ, ಟಿಪ್ಪು ಸುಲ್ತಾನನ ಜಾತ್ಯತೀತತೆ/ಮತಾಂಧತೆ, ಮೌಢ್ಯ-ವಿರೋಧಿ ಕಾನೂನು, ಮತಾಂತರ, ವಿಜಯನಗರದ ವೈಭವೀಕರಣ ಮುಂತಾದವನ್ನು ಅವು ಒಳಗೊಳ್ಳಬೇಕಾಗಿದೆ. ಈ ವಾದಗಳ ನಡುವೆ ಸಂಘರ್ಷ-ಸಂಕರಗಳನ್ನು ಮುಂದೊಯ್ದು ಸಮಾಜ ಮತ್ತು ಸಂಸ್ಕೃತಿಗಳ ಹರಿತ ವಿಶ್ಲೇಷಣೆಗೆ ತೊಡಗುವಲ್ಲಿ ಲೇಖಕರ ಜವಾಬ್ದಾರಿ ಕಂಡುಕೊಳ್ಳಬೇಕಾಗಿದೆ.

ಗೋಷ್ಟಿ2: ದಶಕದ ವೈಚಾರಿಕ ಸಾಹಿತ್ಯ: ಆರ್ಥಿಕತೆ ಮತ್ತು ಅಭಿವೃದ್ಧಿ ರಾಜಕಾರಣದ ಕುರಿತ ವಾಗ್ವಾದದ ನೆಲೆಗಳು

    ಕಳೆದ ದಶಕದಲ್ಲಿ ಕರ್ನಾಟಕದ ಆರ್ಥಿಕತೆಯ ಪೂರ್ಣ ನೆಲೆಯೇ ಬದಲಾಗಿದೆ. ಇದ್ದ ಬದ್ದ ಕೈಗಾರಿಕಾ ಆಧಾರ ನಾಶವಾಗಿ ಐಟಿ-ಬಿಟಿ, ಕಾಲ್ ಸೆಂಟರ್ ಮುಂತಾದ ಸೇವಾ ಕ್ಷೇತ್ರದ ಮೇಲೆಯೇ ಆರ್ಥಿಕತೆ ಅವಲಂಬಿಸಿದೆ. ಗಣಿಗಳ ಮತ್ತು ಇತರ ಪ್ರಾಕೃತಿಕ ಸಂಪನ್ಮೂಲಗಳ ಲೂಟಿ ಅಧಿಕೃತ ನೀತಿಯೋ ಎಂಬಂತೆ ವ್ಯಾಪಕವಾಗಿ ರಭಸದಿಂದ ಸಾಗುತ್ತಿದೆ.  ಸರ್ಕಾರದ ಕೃಷಿ ನೀತಿಗಳಲ್ಲಿ ವ್ಯವಸ್ಥಿತ ಬದಲಾವಣೆಯ ಫಲವಾಗಿ ರೈತ ಕೃಷಿಯ ನೆಲೆಯೇ ನಾಶವಾಗುತ್ತಿದ್ದು, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೃಷಿ ಕೂಲಿಕಾರರ ಸಂಖ್ಯೆ ಏರುತ್ತಿದ್ದು, ನಗರಗಳತ್ತ ವಲಸೆ ಆರಂಭವಾಗಿದೆ. ಪೂರ್ಣ ವಾಣಿಜ್ಯೀಕರಣ, ಕಂಟ್ರಾಕ್ಟೀಕರಣ ಕೃಷಿ ಕ್ಷೇತ್ರದ ಚಿತ್ರವನ್ನೇ ಬದಲಾಯಿಸುತ್ತಿದೆ. ಭೂಸುಧಾರಣೆ ಹಿಂದಕ್ಕೆ ಸರಿದಿದೆ. ಕೈಗಾರಿಕೆ, ವಿದೇಶೀ ಹೂಡಿಕೆ, ಪ್ರಾಜೆಕ್ಟುಗಳ ಹೆಸರಲ್ಲಿ ರಿಯಲ್ ಎಸ್ಟೇಟು ಧಂದೆಗೆ ಭೂಕಬಳಿಕೆ ಅವ್ಯಾಹತವಾಗಿ ಸಾಗಿದೆ. ಪರಿಸರ ರಕ್ಷಣೆ, ಉದ್ಯೋಗ ಸೃಷ್ಟಿ, ಸಾಮಾಜಿಕ ಸೇವೆಗಳು, ದೀರ್ಘ ಕಾಲೀನ ಕೈಗಾರಿಕಾ-ಆರ್ಥಿಕ ಬೆಳವಣಿಗೆ ಮುಂತಾದ ಯಾವುದರ ಬಗೆಗೂ ತಲೆ ಕೆಡಿಸಿಕೊಳ್ಳದ ಇಂತಹ ‘ಚಮಚಾ ಬಂಡವಾಳಶಾಹಿ’ಯ ನೀತಿಗಳು ತೀವ್ರ ಪರಿಸರ ಹಾಗೂ ಸಾಮಾಜಿಕ ಸಮಸ್ಯೆಯನ್ನೂ ಉಂಟು ಮಾಡಿದೆ. ಇವು ಯಾವುದೇ ರೀತಿಯ ‘ಅಭಿವೃದ್ಧಿ’ಯೇ ಬೇಡ ಎಂಬ ಅತಿವಾದಗಳಿಗೆ ಎಡೆ ಮಾಡಿಕೊಟ್ಟಿವೆ.

    ಕಳೆದ ಎರಡು ದಶಕಗಳ ಕಾಲ ಪ್ರಚಲಿತವಾಗಿದ್ದ ಸರಗಳ ಮತ್ತು ಆಳುವ ಪಕ್ಷಗಳ ‘ಮಾರುಕಟ್ಟೆ ಮೂಲಭೂತವಾದ’ದ ‘ಅಧಿಕೃತ’ ಆರ್ಥಿಕತೆ ಮತ್ತು ಅಭಿವೃದ್ಧಿ ರಾಜಕಾರಣದ ವಿರುದ್ಧ ಅಕಾಡೆಮಿಕ್ ವಲಯಗಳಲ್ಲಿ, ಮಾಧ್ಯಮಗಳಲ್ಲಿ,  ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚೆ ನಡೆದಿದೆಯೆ ? ಎಂತಹ ಚರ್ಚೆ ನಡೆದಿದೆ ? ಅಗತ್ಯಕ್ಕೆ ತಕ್ಕಷ್ಟು ಈ ಬಗ್ಗೆ ವೈಚಾರಿಕ ಸಾಹಿತ್ಯ ಪ್ರಕಟವಾಗಿದೆಯೇ ? ಜನ-ಪರ ಸಾಮಾಜಿಕ-ರಾಜಕೀಯ ಚಳುವಳಿಗಳು, ಶಕ್ತಿಗಳು, ಪಕ್ಷಗಳು ಎಂತಹ ಬದಲಿ ಒಡ್ಡಿವೆ ? ಕಳೆದ ದಶಕದಲ್ಲಿ ಆಥರ್ಿಕತೆ ಮತ್ತು ಅಭಿವೃದ್ಧಿ ಬಗ್ಗೆ ಪ್ರಕಟಿತ ವೈಚಾರಿಕ ಸಾಹಿತ್ಯವನ್ನು ಮುಂದಿಟ್ಟುಕೊಂಡು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ.

ಗೋಷ್ಟಿ 3: ಕರ್ನಾಟಕದಲ್ಲಿ ಕೋಮುವಾದ ಮತ್ತು ಬಲಪಂಥೀಯತೆಯ ಬೆಳವಣಿಗೆ: ಪ್ರತಿರೋಧದ ನೆಲೆಗಳು ಮತ್ತು ವೈಚಾರಿಕ ಸಾಹಿತ್ಯ ಒಳಗೊಳ್ಳಬೇಕಾದ ಹೊಸ ಸಾಧ್ಯತೆಗಳು

ಕೋಮು ಸೌಹಾರ್ದತೆ, ಧಾರ್ಮಿಕ ಸಹಿಷ್ಣುತೆ ಮತ್ತು ಸಾಮಾಜಿಕ ಸಮಾನತೆ – ನ್ಯಾಯದ – ಇವೆಲ್ಲದರ ಬಗ್ಗೆ ಎಚ್ಚರ ಜನತೆಯಲ್ಲಿ ಬೇರೂರಿದ್ದ 1970-80ರ ದಶಕದ ಕರ್ನಾಟಕ 1990ರ ದಶಕದ ನಂತರ ಬದಲಾದ್ದು ಹೇಗೆ ? ಬಾಬಾ ಬುಡನ್ ಗಿರಿಯಲ್ಲಿ ದತ್ತಪೀಠ ಸ್ಥಾಪನೆ ಹೇಗೆ ಸಾಧ್ಯವಾಯಿತು ? ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ-ಭಯೋತ್ಪಾದನೆ, ಮಹಿಳೆಯರ ಸ್ವಾತಂತ್ರ್ಯದ ಮೇಲೆ ದಾಳಿ, ನೈತಿಕ ಪೋಲಿಸ್ಗಿರಿ,  ನಿತ್ಯ ದಿನಚರಿಯಾಗಿದ್ದು ಹೇಗೆ ? ಕಾಂಗ್ರೆಸ್ ಸಹ ಭೂಸುಧಾರಣೆ ಮತ್ತು ಸಾಮಾಜಿಕ ನ್ಯಾಯದ ಛಾಂಪಿಯನ್’ ಎಂದು ತೋರಿಸಬೇಕಾಗಿದ್ದ 1970-80ರ ದಶಕದ ಎಡ-ನಡುಪಂಥೀಯ ರಾಜಕಾರಣ 1990ರಲ್ಲಿ ಬಲಪಂಥೀಯತೆಯತ್ತ ವಾಲಿದ್ದು ಹೇಗೆ ? ಕರ್ನಾಟಕದ ಸೃಜನಶೀಲ ಸಾಹಿತ್ಯದ ಮುಖ್ಯಧಾರೆ ಮತ್ತು ವೈಚಾರಿಕ ಸಾಹಿತ್ಯಗಳ ಪ್ರಧಾನ ಮೌಲ್ಯಗಳಲ್ಲಿ – ಸೌಹಾರ್ದತೆ, ಜಾತ್ಯತೀತತೆ, ಸಮಾನತೆ, ಲಿಂಗ ಸಂವೇದನೆ ಇತ್ಯಾದಿ – ಭಾರೀ ಬದಲಾವಣೆಗಳು ಕಾಣದಿದ್ದರೂ, ಇದು ಹೇಗೆ ಸಾಧ್ಯವಾಯಿತು ?

        ಈ ವಿದ್ಯಮಾನಕ್ಕೆ ಪ್ರತಿರೋಧ ಒಡ್ಡುವುದು ಹೇಗೆ ? ಈ ವರೆಗಿನ ಪ್ರತಿರೋಧದ ನೆಲೆಗಳು ಎಷ್ಟರ ಮಟ್ಟಿಗೆ ಸಫಲವಾಗಿವೆ ? ಇಲ್ಲವಾದರೆ ಯಾಕೆ ವಿಫಲವಾಗಿವೆ ? ಇದಕ್ಕಾಗಿ ವೈಚಾರಿಕ ಸಾಹಿತ್ಯ ಒಳಗೊಳ್ಳಬೇಕಾದ ಹೊಸ ಸಾಧ್ಯತೆಗಳೇನು ? ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಮೂಲಭೂತವಾದ, ಜಾತಿ ಮುಂತಾದ ಐಡೆಂಟಿಟಿ ರಾಜಕೀಯಗಳಿಗೆ ಬಲಿಯಾಗಿರುವ ಜನವಿಭಾಗಗಳನ್ನು ಅದರಿಂದ ಬಿಡಿಸುವುದು ಹೇಗೆ ? ಜನತೆಯ ದೈನಂದಿನ ಆಚರಣೆಗಳು, ಹಬ್ಬ-ಉತ್ಸವಗಳು, ಸಾಂಪ್ರದಾಯಿಕ ನಂಬಿಕೆಗಳಲ್ಲಿ ಸತತ ಮಧ್ಯಪ್ರವೇಶ ಮಾಡುತ್ತಾ ವೈಚಾರಿಕತೆ ಮೂಡಿಸಬೇಕೆ ? ಈ ವಿದ್ಯಮಾನಗಳಿಗೆ ಕುಮ್ಮಕ್ಕು ಕೊಡುತ್ತಿರುವ ಸಾಮೂಹಿಕ ಮಾಧ್ಯಮಗಳಲ್ಲಿ ಯಾವ ರೀತಿಯ ಮಧ್ಯಪ್ರವೇಶ ಬೇಕು ? ಇವೆಲ್ಲದರಲ್ಲಿ ಸಾಹಿತಿ, ಕಲಾವಿದರ ಜವಾಬ್ದಾರಿ ಏನು ?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s