“ಯಾರಿಗೂ ನೋವುಂಟು ಮಾಡದ್ದು ವೈಚಾರಿಕ ಸಾಹಿತ್ಯ ಹೇಗಾಗುತ್ತದೆ…” -ಪ್ರೊ. ಚೆನ್ನಿ

DSC00708

“ಯಾರಿಗೂ ನೋವುಂಟು ಮಾಡದ್ದು ವೈಚಾರಿಕ ಸಾಹಿತ್ಯ ಹೇಗಾಗುತ್ತದೆ…” -ಪ್ರೊ. ಚೆನ್ನಿ

ಇದು ವೈಚಾರಿಕತೆಯ ಮೇಲೆ ಅತ್ಯಂತ ತೀವ್ರ ಸಂಘಟಿತ ದಾಳಿಯ ಸಮಯ. ಜನರ ನೆಲ, ಜಲ, ಭಾಷೆಗಳನ್ನು ಪರಭಾರೆ ಮಾಡುವುದೇ ತನ್ನ ಪರಮ ಕರ್ತವ್ಯ ಎಂದು ತಿಳಿದಿರುವ ಪ್ರಭುತ್ವಕ್ಕೆ ಎಂದೂ ಇಲ್ಲದ ಅಸಹನೆ. ಅದರ ವಿರುದ್ಧ ಯಾವುದೇ ದನಿ ಉಳಿಯದ ಹಾಗೆ ದಾಳಿ ಮಾಡುತ್ತಿದೆ. ಯಾವುದೇ ವೈಚಾರಿಕತೆಯ ವಿರುದ್ಧ ಮಾಧ್ಯಮ-ಧಾರ್ಮಿಕ ಸಂಸ್ಥೆಗಳೂ ಇದನ್ನೇ, ‘ಜನರ ಧಾರ್ಮಿಕ ಭಾವನೆಗಳಿಗೆ ನೋವಾಗುತ್ತದೆ’ ಎಂಬ ಹುಯಿಲೆಬ್ಬಿಸಿ ಮಾಡುತ್ತಿವೆ. ಆ ಮೂಲಕ ವೈಚಾರಿಕತೆಯ ಮೇಲೆ ದಾಳಿ ಮಾಡಲು ಪ್ರಭುತ್ವಕ್ಕೆ ‘ಪ್ರಾಂಪ್ಟ್’ ಮಾಡುತ್ತಿವೆ. ಯಾರಿಗೂ ನೋವುಂಟು ಮಾಡದ್ದು ವೈಚಾರಿಕ ಸಾಹಿತ್ಯ ಹೇಗಾಗುತ್ತದೆ ? ಯಾವುದೇ ಹೊಸ ವಿಚಾರ ಕೆಲವರಿಗೆ ನೋವುಂಟು ಮಾಡಿಯೇ ಮಾಡುತ್ತದೆ. ಬಸವ ಜಾತಿ ವ್ಯವಸ್ಥೆ ಬಗ್ಗೆ ಎತ್ತಿದ ಪ್ರಶ್ನೆ ಉಚ್ಚ ಜಾತಿಯವರಿಗೆ, ಪುರುಷ ಪ್ರಾಧಾನ್ಯತೆ ಬಗ್ಗೆ ಅಕ್ಕ ಎತ್ತಿದ ಪ್ರಶ್ನೆ ಪುರುಷರಿಗೆ ‘ನೋವುಂಟು’ ಮಾಡಲಿಲ್ಲವೇ ? ಅತ್ಯಂತ ಕ್ರೂರ ಜಾತಿ-ಅಸ್ಪøಶ್ಯತೆ ಬೆಳೆಸಿದ ಧರ್ಮಕ್ಕೆ ಇಂತಹ ‘ಸುಕೋಮಲ ಭಾವನೆ’ ಎಲ್ಲಿಂದ ಬಂತು ಎಂದು ಪ್ರೊ. ರಾಜೇಂದ್ರ ಚೆನ್ನಿ ಪ್ರಶ್ನಿಸಿದÀರು.

ಪ್ಲೇಗಿನ ಕಾಲದಲ್ಲಿ ಸಂಭ್ರಮ

ಅವರು ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಇದೇ ಫೆಬ್ರುವರಿ 1 ರಂದು ಸಾಹಿತ್ಯ ಸಮುದಾಯ ಸಂಘಟಿಸಿದ ‘ದಶಕದ ವೈಚಾರಿಕ ಸಾಹಿತ್ಯ: ಒಂದು ಅವಲೋಕನ’ ಉದ್ಘಾಟಿಸಿ ಮಾತನಾಡುತ್ತಿದ್ದರು. ವೈಚಾರಿಕ ಸಾಹಿತ್ಯ ಪ್ರಕಟಿತ ಪುಸ್ತಕ-ಲೇಖನಗಳಿಗೆ ಅಥವಾ ಅಕಾಡೆಮಿಕ್ ವಲಯಕ್ಕಾಗಲಿ ಸೀಮಿತಗೊಳಿಸಬಾರದು. ಅದರÀ ಹರವು ಪತ್ರಿಕೆ-ಟಿವಿಗಳಲ್ಲಿ ಬರುವ (ಸೆಕ್ಯುಲರಿಸಂ, ಜಾಗತೀಕರಣ ಮುಂತಾದವುಗಳ ಬಗ್ಗೆ) ಲೇಖನ-ಚರ್ಚೆ-ಸಂವಾದ ಮತ್ತು ಶ್ರಮಜೀವಿಗಳಿಗೆ ಬದುಕಿನ ಜತೆ ಹುಟ್ಟುವ (ಪೊಸ್ಕೊ ಮುಂತಾದ ಹೋರಾಟಗಳಲ್ಲಿ ಕಂಡು ಬರುವ) ತಿಳುವಳಿಕೆಯನ್ನು ಒಳಗೊಂಡಿವೆ ಎಂದರು. ಫ್ರೆಂಚ್ ಲೇಖಕ ಕಾಮೂ ಅವರ ‘ಪ್ಲೇಗ್’ ಎಂಬ ಕಾದಂಬರಿಯಲ್ಲಿ ಊರಿಗೆ ಪ್ಲೇಗ್ ಬಂದಾಗ ಅದನ್ನು ಮರೆಸಲು ಸಂಜೆಯನ್ನು ಮೋಜಿನಲ್ಲಿ ಕಳೆಯಬಯಸುವ ಒಂದು ವರ್ಗದ ಸಂಭ್ರಮ ಮತ್ತು “ಫಾಂತಮಾರ’ ಎಂಬ ಕಾದಂಬರಿಯಲ್ಲಿ ಜನರನ್ನು ಸುಮ್ಮನಿರಿಸಲು ಏನು ಮಾಡಬಹುದು ಎಂದು ದೇವರು-ಪೋಪ್ ದೀರ್ಘವಾಗಿ ಚರ್ಚಿಸಿ ‘ಜನ ತುರಿಸಿಕೊಳ್ಳುತ್ತಾ ಇರಲಿ ಎಂದು ತಲೆ ತುಂಬಾ ಹೇನು’ ಕೊಡಲು ನಿರ್ಧರಿಸುವ – ಎರಡು ರೂಪಕಗಳು ‘ಫ್ಯಾಸಿಸಂ ಹೊಸ್ತಿಲಲ್ಲಿ ನಿಂತಿರುವ’ ನಮ್ಮ ಸಂದರ್ಭದಲ್ಲಿ ಪ್ರಸ್ತುತ ಎಂದರು ಪ್ರೊ. ಚೆನ್ನಿ ಮಾರ್ಮಿಕವಾಗಿ. ಆ ಮೂಲಕ ಇಡೀ ದಿನದ ಚಿಂತನ-ಮಂಥನಕ್ಕೆ ಭೂಮಿಕೆ ಸಿದ್ಧಪಡಿಸಿದರು. ಪ್ರೊ. ಆರ್.ಕೆ.ಹುಡಗಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಮುದಾಯದ ಸಂಚಾಲಕ ವಿಠ್ಠಲ ಭಂಡಾರಿ ಸಾಹಿತ್ಯ ಸಮುದಾಯದ ಮತ್ತು ಅವಲೋಕನದ ಆಶಯದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯದ ವಲಯ ಕಾರ್ಯದರ್ಶಿ ವಾಸುದೇವ ಉಚ್ಚಿಲ್ ಸ್ವಾಗತಿಸಿದರು.

ದಶಕದ ವೈಚಾರಿಕ ಸಾಹಿತ್ಯದ ಬಗ್ಗೆ ಚಿಂತನ ಮಂಥನ ಮೂರು ಗೋಷ್ಟಿಗಳಲ್ಲಿ ಹರಡಿತ್ತು. ‘ಸಮಾಜ ಮತ್ತು ಸಂಸ್ಕøತಿಯ ನಿರ್ವಚನೆಯ ಸ್ವರೂಪಗಳು’ (ಗೋಷ್ಟಿ-1), ‘ಆರ್ಥಿಕತೆ ಮತ್ತು ಅಭಿವೃದ್ಧಿ ರಾಜಕಾರಣದ ಕುರಿತು ವಾಗ್ವಾದದ ನೆಲೆಗಳು’ (ಗೋಷ್ಟಿ-2) ಮತ್ತು ‘ಕರ್ನಾಟಕದಲ್ಲಿ ಕೋಮುವಾದ ಮತ್ತು ಬಲಪಂಥೀಯತೆಯ ಬೆಳವಣಿಗೆ: ಪ್ರತಿರೋಧದ ನೆಲೆಗಳು ಮತ್ತು ಹೊಸ ಸಾಧ್ಯತೆಗಳು’ (ಗೋಷ್ಟಿ-3)–ಆ ಮೂರು ಗೋಷ್ಟಿಗಳ ವಿಷಯಗಳಾಗಿದ್ದವು. ಈ ಮೂರು ಗೋಷ್ಟಿಗಳನ್ನು ಒಂದು ವಿಶಿಷ್ಟ ರೀತಿಯಲ್ಲಿ ನಡೆಸಲಾಯಿತು. ಪ್ರತಿ ವಿಷಯದ ಮೇಲೆ ಇಬ್ಬರು ಚಿಂತಕರು ಸುಮಾರು 15 ನಿಮಿಷಗಳಲ್ಲಿ ಕಿರು ಟಿಪ್ಪಣಿಗಳನ್ನು ಮಂಡಿಸಿದರು. ಆ ಮೇಲೆ ಮುಕ್ತ ಸಂವಾದ ನಡೆಯಿತು. ಇವೆಲ್ಲವನ್ನು ಸಮನ್ವಯಗೊಳಿಸಿ ತಮ್ಮ ಮಹತ್ವದ ಒಳನೋಟಗಳನ್ನು ಸೇರಿಸಿ ಸಂವಾದದ ಒಟ್ಟು ಸಾರವನ್ನು ಸಮನ್ವಯಕಾರರು ಮುಂದಿಟ್ಟರು. ಪ್ರೊ. ರಹಮತ್ ತರೀಕೆರೆ ಗೋಷ್ಟಿ-1 ರ ಸಮನ್ವಯಕಾರರಾಗಿದ್ದರು. ಗೋಷ್ಟಿ-2ರ ಸಮನ್ವಯ ಮಾಡಿದವರು ಪ್ರೊ. ಚಂದ್ರ ಪೂಜಾರಿ. ಡಾ.ಎಚ್.ಎಸ್.ಅನುಪಮ ಗೋಷ್ಟಿ-3ರ ಸಮನ್ವಯ ನಡೆಸಿ ಕೊಟ್ಟರು.

‘ಬಾಳುವೆಯೇ ಬೆಳಕು’ ಧೋರಣೆ ಅಗತ್ಯ

DSC00760

‘ಸಮಾಜ ಮತ್ತು ಸಂಸ್ಕøತಿಯ ನಿರ್ವಚನೆಯ ಸ್ವರೂಪಗಳು’ ಬಗೆಗಿನ ಸಂವಾದದಲ್ಲಿ – ಆ ಬಗೆಗಿನ ವೈಚಾರಿಕ ಸಂಘರ್ಷಗಳು ಒಂದು ಸಣ್ಣ ವಲಯಕ್ಕೆ ಸೀಮಿತವಾಗಿರುವುದು, ಜನಸಾಮಾನ್ಯರ ವಿವೇಕ ಪ್ರಜ್ಞೆಗಳನ್ನು ಹೊಸಕಿಹಾಕುವ ಮೌಢ್ಯ ಶಿಕ್ಷಣ ಮತ್ತು ‘ಪ್ರಜಾಪ್ರಭುತ್ವ’ಗಳÀನ್ನು ಆವರಿಸಿರುವುದು, ವೈಚಾರಿಕತೆಯ ಸಂಘಟಿತ ಶತ್ರುವಿನ ವಿರುದ್ಧ ಚೆಲ್ಲಾಪಿಲ್ಲಿಯಾದ ಪ್ರತಿರೋಧ, ಪ್ರಮುಖ ಜನಪರ ಪ್ರಗತಿಪರ ಸಿದ್ಧಾಂತಿಗಳ ಐಕ್ಯತೆ ಬದಲು ಸಂಘರ್ಷ-ವಿಘಟನೆ, ಭೂಮಿಯ ಪರಭಾರೆ ಮೂಲಕ ಕೃಷಿಯನ್ನು ನಾಶ ಮಾಡುತ್ತಲೇ ಕೃಷಿಮೂಲ ಸಂಸ್ಕತಿಯ ಅಂಶಗಳನ್ನು ಧಾರ್ಮಿಕ ನಂಬಿಕೆಯ ಹೆಸರಲ್ಲಿ ‘ಉತ್ಸವ’ ‘ಸಂಭ್ರಮ’ ಆಚರಣೆ ಮಾಡುವ ಆಳುವ ವರ್ಗಗಳ ಹುನ್ನಾರ, ದೊಡ್ಡ ಪ್ರಮಾಣದ ಬಲಪಂಥೀಯ ‘ವೈಚಾರಿಕ ಸಾಹಿತ್ಯ’ದ ಪ್ರಕಟಣೆ ಜನರ ಮೇಲೆ ಬೀರಿದ ಪ್ರಭಾವ, ಹಿಂದಿನ ಕಾಲಘಟ್ಟಗಳ ವೈಚಾರಿಕ ಸಾಹಿತ್ಯ ಈ ದಶಕದಲ್ಲಿ ಬೀರಿದ ಪ್ರಭಾವವನ್ನೂ ಪರಿಶೀಲಿಸಬೇಕಾದ್ದು, ಸಮಾಜ ವಿಜ್ಞಾನಗಳಲ್ಲಿ ಜ್ಞಾನ ಉತ್ಪಾದನೆಯ ಅಭಾವ – ಹೀಗೆ ಹತ್ತು ಹಲವು ವಿಚಾರಗಳು ಹೊಮ್ಮಿದವು. ಪ್ರೊ. ರಹಮತ್ ತರೀಕೆರೆಯವರು ತಮ್ಮ ಸಮನ್ವಯ ಮಾತುಗಳಲ್ಲಿ ವೈಚಾರಿಕತೆ ಜನತೆಯ ಸಾಂಸ್ಕøತಿಕ ಲೋಕದ ಅನುಭಾವಿ ಅಂಶಗಳನ್ನು ಒಳಗೊಳ್ಳುವ ನುಡಿಗಟ್ಟಿನ ಬಗ್ಗೆ ಮರುಚಿಂತನೆ, ನಾಸ್ತಿಕವಾದದ ಬದಲು ಕಾರಂತರ ‘ಬಾಳುವೆಯೇ ಬೆಳಕು’ನಂತಹ ಧೋರಣೆಯ ಅಗತ್ಯದ ಬಗ್ಗೆ ಗಮನ ಸೆಳೆದರು. ಅವರು ಸಂಸ್ಕøತಿ ಚಿಂತನೆ-ಅಧ್ಯಯನ ಐಡೆಂಟಿಟಿ ರಾಜಕಾರಣದ ಪ್ರಭಾವದಲ್ಲಿ ಚಿಕಿತ್ಸಕ ಬುದ್ಧಿ ಕಳೆದುಕೊಂಡಿರುವುದರ ಅಪಾಯವನ್ನೂ ಮನದಟ್ಟು ಮಾಡಿದರು. ಡಾ. ರಂಗನಾಥ ಕಂಟನಕುಂಟೆ ಮತ್ತು ಡಾ. ಜ್ಯೋತಿ ಚೆಳ್ಯಾರ್ ಟಿಪ್ಪಣಿ ಮಂಡಿಸಿದ್ದರು.

ಜಾತಿ-ಧರ್ಮ-ಸಂಸ್ಕøತಿ ಅನಸ್ತೇಶಿಯಾಗಳು

ಈಗಿನ ಆರ್ಥಿಕತೆ (ಶೋಷಣೆ ಅಸಮಾನತೆಗಳನ್ನು ನೆನಪಿಸುವ) ಬಂಡವಾಳಶಾಹಿ ವ್ಯವಸ್ಥೆ ಅಲ್ಲ. ಬದಲಾಗಿ (ಸಮಾನತೆ, ಸ್ವಾತಂತ್ರ್ಯ, ಪಾರದರ್ಶಕತೆಯನ್ನು ನೆನಪಿಸುವ) ಮಾರುಕಟ್ಟೆ ಆರ್ಥಿಕ ವ್ಯವಸ್ಥೆ. ಸಂಪನ್ಮೂಲನದ ಒಡೆತನ ಮುಖ್ಯ ಅಲ್ಲ. ಅದು ಯಾರ ಹಿತದಲ್ಲಿ ಕೆಲಸ ಮಾಡುತ್ತದೆ ಎಂಬುದು ಮುಖ್ಯ. ಆದ್ದರಿಂದ ಅಭಿವೃದ್ಧಿ ಸಾಧಿಸುವ ಆಡಳಿತ (ಗವರ್ನೆನ್ಸ್) ಮುಖ್ಯ. ಅಭಿವೃದ್ಧಿ (ಅಂದರೆ ಆರ್ಥಿಕ) ರಾಜಕಾರಣವನ್ನು ನಿರ್ದೇಶಿಸುತ್ತದೆ. ರಾಜಕಾರಣ ಆರ್ಥಿಕ (ಅಭಿವೃದ್ಧಿ)ವನ್ನಲ್ಲ. ಅಭಿವೃದ್ಧಿ ಲಿಂಗ-ತಟಸ್ಥವಾದದ್ದು. ಅಭಿವೃದ್ಧಿ ಜಾತಿ-ತಟಸ್ಥವಾದದ್ದು. ವರ್ಗವಂತೂ ಇಲ್ಲವೇ ಇಲ್ಲ. ಇದು ಇಂದಿನ ನವ-ಉದಾರವಾದಿ ಸಂದರ್ಭಧಲ್ಲಿ ಎಲ್ಲವನ್ನೂ ತಲೆಕೆಳಗು ಮಾಡುವ ಅಭಿವೃದ್ಧಿ ರಾಜಕಾರಣದ ಪರಿಭಾಷೆ. ಇದು ಸಂಪನ್ಮೂಲದ ಒಡೆತನದ ಕೇಂದ್ರೀಕರಣ ಮತ್ತು ಅಗಾಧ ಅಸಮಾನತೆಯನ್ನು ಮರೆಮಾಚುವಂತಹುದು. ಜಾತಿ-ಧರ್ಮ-ಸಂಸ್ಕøತಿಗಳು ಆರ್ಥಿಕ ಶರೀರದ ಅಂಗಗಳ ಮೇಲೆ ದೊಡ್ಡ ಶಸ್ತ್ರ ಚಿಕಿತ್ಸೆ ನಡೆಸಿದರೂ ಕತ್ತರಿಸಿ ಹಾಕಿದರೂ ಗೊತ್ತಾಗದಂತೆ ಮಾಡುವ ಅನಸ್ತೇಶಿಯಾಗಳು. ಬದಲಿ ಅಭಿವೃದ್ಧಿ ರಾಜಕಾರಣ ರೂಪಿಸಿ ಪ್ರಚಾರ ಮಾಡುವ ತುರ್ತು ಅಗತ್ಯ ಇದೆ. ಬದಲಿ ಮಾದ್ಯಮವಿಲ್ಲದೆ ಇದು ಸಾಧ್ಯ ಇಲ್ಲ. ಇದು ಪ್ರೊ. ಚಂದ್ರ ಪೂಜಾರಿ ‘ಆರ್ಥಿಕತೆ ಮತ್ತು ಅಭಿವೃದ್ಧಿ ರಾಜಕಾರಣದ ಕುರಿತು ವಾಗ್ವಾದದ ನೆಲೆಗಳು’ ಗೋಷ್ಟಿಯಲ್ಲಿ ಆಡಿದ ಸಮನ್ವಯ ಮಾತುಗಳ ಸಾರ.

DSC00875

ಸ್ವಾತಂತ್ರ್ಯದ ನಂತರ ದೇಶ ಅಂಗೀಕರಿಸಿದ ನೆಹರೂವಾದ ಸಮಾಜವಾದ ಎಂಬ ತಪ್ಪು ಕಲ್ಪನೆ, ಭಾರತದ ಸಂದರ್ಭದಲ್ಲಿ ನೆಹರೂವಾದಿ ಬಂಡವಾಳಶಾಹಿ ಪಥದ ವೈಫಲ್ಯ ಸಮಾಜವಾದದ ವೈಫಲ್ಯ ಮತ್ತು ಅದು ನವ-ಉದಾರೀಕರಣದ ನೀತಿಗಳಿಗೆ ದಾರಿ ಮಾಡಿಕೊಟ್ಟಿತು ಎಂಬ ಈಗಿನ ಅಭಿವೃದ್ಧಿ ರಾಜಕಾರಣದ ಸಮರ್ಥನೆಯ ಹುಳುಕುಗಳು, ಭೂಮಿಯ ಪ್ರಶ್ನೆಯ ಉದಾಹರಣೆ ತೆಗೆದುಕೊಂಡು ಬದಲಿ ಅಭಿವೃದ್ಧಿ ರಾಜಕಾರಣದ ನೀತಿಗಳು, ಸಂವಿಧಾನ-ದತ್ತ ‘ವೈಜ್ಞಾನಿಕ ಮನೋಭಾವ’ದ ಬೆಳಕಿನಲ್ಲಿ ಕರ್ನಾಟಕದಲ್ಲಿ ಸಾಂಸ್ಕøತಿಕ ರಾಜಕಾರಣದ ಸಂಘರ್ಷದಲ್ಲಿ ಇತ್ತೀಚಿನ ಪ್ರಮುಖ (ಶಾಲಾ ಮಕ್ಕಳಿಗೆ ಮೊಟ್ಟೆ ಬೇಡ ಎನ್ನುವ ಆಹಾರ ರಾಜಕಾರಣ, ಮಡೆಸ್ನಾನ ವಿವಾದ, ಮೌಢ್ಯ ನಿಷೇಧ ಕಾನೂನು) ಪ್ರಕರಣಗಳು – ಇವು ಟಿಪ್ಪಣಿ ಮತ್ತು ಸಂವಾದಗಳಲ್ಲಿ ಹೊಮ್ಮಿದ ಇತರ ಅಂಶಗಳು. ಡಾ. ಜಯಪ್ರಕಾಶ ಶೆಟ್ಟಿ ಮತ್ತು ಕೆ. ಪ್ರಕಾಶ್ ಈ ಮೊದಲು ಟಿಪ್ಪಣಿಗಳನ್ನು ಮಂಡಿಸಿದ್ದರು.

ಕೋಮುವಾದಕ್ಕೆ ಪ್ರತಿರೋಧ ಒಡ್ಡಲು ಪ್ರಗತಿಪರರ ಐಕ್ಯತೆ

ಕೋಮುವಾದಿ ಹಿಂದೂ ಪರಿಕಲ್ಪನೆಗೆ ಪರ್ಯಾಯವಾದ ಪರಿಕಲ್ಪನೆ ಮತ್ತು ಅದಕ್ಕೆ ಸೂಚಕವಾಗಬಹುದಾದ ಹೆಸರು (ಅಹಿಂದ?), ಜಾತಿ-ವರ್ಗ-ಲಿಂಗ ಅಸಮಾನತೆಗಳ ಬಗ್ಗೆ ಅರಿವು ಇರುವ ಅಂತಹ ಪರಿಕಲ್ಪನೆ, ವ್ಯಾಪಕ ಕೋಮುವಾದಿ-ವಿರೋಧಿ ನೆಲೆಯ ಸಂಘಟನೆಯ ಅಗತ್ಯ, ಕೋಮುವಾದ ವಸಾಹತುಶಾಹಿ ಕಾಲದ ಕೂಸು, ಧಾರ್ಮಿಕ ಮೂಲಭೂತವಾದದ ಜಾಗತಿಕ ಆಯಾಮ, ‘ಧಾರ್ಮಿಕ ಮೂಲಭೂತವಾದ’ ಜಾಗತೀಕರಣದ ದಾಳಿಯಿಂದ ಬೆದರಿದ ‘ಧರ್ಮ’ದ ಪ್ರತಿಕ್ರಿಯೆಯೇ ಅಥವಾ ಧರ್ಮ-ರಾಜಕಾರಣಗಳ ಅಪವಿತ್ರ ಮೈತ್ರಿಯೇ ?, ಚಿಂತಕರ ಹಾಗೂ ಸಿದ್ಧಾಂತಗಳ ಮೂರ್ತೀಕರಣದ ಅಪಾಯ, ಕೋಮುವಾದಕ್ಕೆ ಪ್ರತಿರೋಧ ಒಡ್ಡಲು ಎಲ್ಲಾ ಪ್ರಗತಿಪರರ ವಿಷಯಾಧಾರಿತ ಐಕ್ಯತೆಯ ಅಗತ್ಯ(ಮಹಿಳಾ ದೌರ್ಜನ್ಯ-ವಿರೋಧಿ ವೇದಿಕೆಯ ಮಾದರಿಯಲ್ಲಿ), ಇಂತಹ ಪ್ರತಿರೋಧದಲ್ಲಿ ಮಹಿಳೆಯನ್ನು ದೊಡ್ಡ ರೀತಿಯಲ್ಲಿ ಒಳಗೊಳ್ಳುವ ಅಗತ್ಯ – ಇವೆಲ್ಲ ಅಂಶಗಳು ‘ಕರ್ನಾಟಕದಲ್ಲಿ ಕೋಮುವಾದ ಮತ್ತು ಬಲಪಂಥೀಯತೆಯ ಬೆಳವಣಿಗೆ: ಪ್ರತಿರೋಧದ ನೆಲೆಗಳು ಮತ್ತು ಹೊಸ ಸಾಧ್ಯತೆಗಳು’ ಗೋಷ್ಟಿಯ ಸಂವಾದದಲ್ಲಿ ಮೂಡಿ ಬಂದವು. ಜನತೆಯ ಆತಂಕದ ಮತ್ತು ಆನಂದದ ಎರಡೂ ಸಂದರ್ಭಗಳಲ್ಲೂ ಜತೆ ಇರುತ್ತಾ ಪ್ರತಿ-ಸಂಸ್ಕøತಿ ಕಟ್ಟುವ ಕೆಲಸದ ಬಗ್ಗೆ ಡಾ. ಅನುಪಮ ಒತ್ತಿ ಹೇಳಿದರು. ದಡಕ್ಕೆ ಬಂದ ನಕ್ಷತ್ರ ಮೀನು ಸಮುದ್ರಕ್ಕೆ ಮರಳಿಸುವ ದಣಿವರಿಯದ ಅಜ್ಜನ ಕತೆಯ ಮೂಲಕ ಕೋಮುವಾದಕ್ಕೆ ಪ್ರತಿರೋಧ ಒಡ್ಡುವ ಕಾಯಕದ ಅಗಾಧತೆ ಮತ್ತು ಚಿಕ್ಕ ಹೆಜ್ಜೆಗಳ ಮೂಲಕ ಅತ್ತ ಸಾಗುವ ಅಗತ್ಯದ ಬಗೆಗೂ ಮನಮುಟ್ಟುವಂತೆ ಹೇಳಿದರು. ಡಾ. ವಾಸುದೇವ ಬೆಳ್ಳೆ ಟಿಪ್ಪಣಿ ಮಂಡಿಸಿದ್ದರು.

ಈ ಸಂವಾದವನ್ನು ಸಾಹಿತ್ಯ ಸಮುದಾಯ ಮಂಗಳೂರಿನ ಸಮುದಾಯ ಘಟಕ ಮತ್ತು ಮೂರು ಸ್ಥಳೀಯ ಸಂಘಟನೆಗಳ ಜತೆ ಕೈಜೋಡಿಸಿ ಸಂಘಟಿಸಿತ್ತು. ವಿಕಾಸ (ಮಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ಸಂಘ), ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಕನ್ನಡ ಸಂಘ – ಇವೇ ಆ ಮೂರು ಸಂಘಟನೆಗಳು. ಈ ಸಂಘಟನೆಗಳ ನಾಯಕರ ಸದಸ್ಯರ ಉತ್ಸಾಹಿ ಪಾಲ್ಗೊಳ್ಳುವಿಕೆಯಿಂದ ನಗರದ ಕೇಂದ್ರ ಪ್ರದೇಶದಲ್ಲಿ ಇರುವ ರವೀಂದ್ರ ಕಲಾಭವನ ಅಂದು 300ಕ್ಕೂ ಹೆಚ್ಚು ಲೇಖಕ-ಲೇಖಕಿಯರು, ಚಿಂತಕರು, ಕಲಾವಿದರು, ಅಧ್ಯಾಪಕರು, ವಿದ್ಯಾರ್ಥಿಗಳಿಂದ ಕಿಕ್ಕಿರಿದು ತುಂಬಿತ್ತು. ಈ ಸಂಘಟನೆಗಳ ಪಿ. ಕೃಷ್ಣಮೂರ್ತಿ, ಪ್ರಕಾಶಚಂದ್ರ ಶಿಶಿಲ, ನಾಗಪ್ಪ ಗೌಡ, ಜಾನಕಿ ಬ್ರಹ್ಮಾವರ, ರಾಜೇಂದ್ರ ಉಡುಪ ಇದಕ್ಕಾಗಿ ದುಡಿದವರು. ಇದು ಸಾಹಿತ್ಯ ಸಮುದಾಯ ‘ದಶಕದ ಸಾಹಿತ್ಯ: ಒಂದು ಅವಲೋಕನ’ ಸರಣಿಯಲ್ಲಿ ನಡೆಸುತ್ತಿರುವ ಎರಡನೇ ಇಂತಹ ಸಂವಾದ. ಹಿಂದೆ ದಶಕದ ಕಥಾಸಾಹಿತ್ಯದ ಅವಲೋಕನದ ಬಗ್ಗೆ ಸಂವಾದವನ್ನು ಗುಲ್ಬರ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗುಲ್ಬರ್ಗದಂತೆ ಇಲ್ಲೂ ಸಂವಾದದ ಮರುದಿನ ಪ್ರಾದೇಶಿಕ (ಕರಾವಳಿಯ) ಲೇಖಕರ ಸಮಾವೇಶ ಸಂಘಟಿಸಲಾಗಿತ್ತು. ದಶಕದ ನಾಟಕ, ವಿಮರ್ಶೆ, ಕಾವ್ಯ, ಕಾದಂಬರಿಗಳ ಅವಲೋಕನದ ಸಂವಾದಗಳನ್ನು ಮುಂದಿನ ದಿನಗಳಲ್ಲಿ ಶಿರಸಿ, ಶಿವಮೊಗ್ಗ, ಧಾರವಾಡ ಮತ್ತು ಮೈಸೂರಿನಲ್ಲಿ ಸಂಘಟಿಸಲಾಗುವುದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s