ಸಹಯಾನ ಜಾನಪದ ಜಾತ್ರೆ-2015

ಭಿನ್ನಭಾವವ ಮಾಡಬೇಡಿರಿ

ಭಿನ್ನಭಾವವ ಮಾಡಬೇಡಿರಿ

ಭಿನ್ನ ಭೇದವ ಮಾಡಬೇಡಿರಿ ……. ಅಯ್ಯಾ …….
ಹಾರುವರ ಮನೆಯೊಳಗೆ
ಲಿಂಗಾಯತರ ಮನೆಯೊಳಗೆ
ಗೌಡರ ಮನೆಯೊಳಗೆ
ಹಾಲನ್ನು ಕುಡಿವುದು ಬೆಕ್ಕು ……. ಅಯ್ಯಾ …….
ಭಿನ್ನ ಭೇದವ ಮಾಡಬೇಡಿರಿ.

ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಪಿಚ್ಚಳ್ಳಿ ಶ್ರೀನಿವಾಸ ಅವರು ಮೈಲಾರ ಮಹಾಲಿಂಗೇಶ್ವರನ ಹಾಡನ್ನು ಏರು ದನಿಯಲ್ಲಿ ಹಾಡುತ್ತಿರುವಂತೆ ಭಿನ್ನ ಭೇದವ ಮರೆತ ಸಹೃದಯ ಪ್ರೇಕ್ಷಕರು ಕೆರೆಕೋಣದಲ್ಲಿರುವ ಆರ್.ವಿ. ಯವರ ಸಹಯಾನದ ಅಂಗಳದಲ್ಲಿ ಬಂದು ಸೇರತೊಡಗಿದರು. ಪ್ರತಿವರ್ಷವೂ ಹೊಸತಲೆಮಾರಿನೊಂದಿಗೆ ಹೊಸ ವಿಷಯವನ್ನು ತಳಕು ಹಾಕಿಕೊಂಡು ‘ಸಹಯಾನ’ ಒಂದು ದಿನದ ಸಾಹಿತ್ಯೋತ್ಸವವನ್ನು ನಡೆಸುತ್ತಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಕರ್ನಾಟಕ ಜಾನಪದ ಅಕಾಡೆಮಿಯ ಸಹಯೋಗದಲ್ಲಿ ನಡೆದ ಈ ವರ್ಷದ ಸಹಯಾನ ಸಾಹಿತ್ಯೋತ್ಸವದ ವಿಷಯ ‘ಜಾನಪದ:ಹೊಸ ತಲೆಮಾರು’. ಜಾನಪದ ನಡೆದು ಬಂದ ದಾರಿಯ ಹೆಜ್ಜೆ ಗುರುತುಗಳನ್ನು ಗುರುತಿಸುತ್ತಲೇ ಇಂದಿನ ತಲೆಮಾರು ಅದಕ್ಕೆ ಸ್ಪಂದಿಸುತ್ತಿರುವ ರೀತಿಯನ್ನು ವಿಶ್ಲೇಷಿಸುತ್ತಾ, ಇಂದಿಗೆ ಅದರ ಅವಶ್ಯಕತೆಯನ್ನು ಅರಿಯುವುದರತ್ತ ಎಲ್ಲ ಗೋಷ್ಠಿಗಳು ಆಯೋಜಿಸಲ್ಪಟ್ಟಿದ್ದವು. ಕೊನೆಯಲ್ಲಿ ಉತ್ತರ ಕನ್ನಡದ ಹಲವು ಬುಡಕಟ್ಟು, ಸಮುದಾಯಗಳ ಕುಣಿತಗಳನ್ನೊಳಗೊಂಡ ಜಾನಪದ ಕಲೋತ್ಸವದೊಂದಿಗೆ ಚಿಂತನ ರಂಗ ಅಧ್ಯಯನ ಕೇಂದ್ರವು ಅಭಿನಯಿಸಿದ ಹೆಣ್ಣಿನ ಕಣ್ಣಲ್ಲಿ ಲೋಕವನ್ನು ಗ್ರಹಿಸುವ ಕಥಾನಕವುಳ್ಳ ಎಚ್.ಎಸ್ವಿ.ಯವರ ಊರ್ಮಿಳಾ ನಾಟಕವೂ ಉತ್ಸವಕ್ಕೆ ಕಳೆ ತಂದಿತ್ತು.
ಆರ್.ವಿ.ಯವರು ಯುವಜನರ ಬಗ್ಗೆ ವ್ಯವಹರಿಸುವಾಗ ತಾನು ಹಿರಿಯನೆಂಬ ಭಾವದಿಂದ ಅವರೊಂದಿಗೆ ವ್ಯವಹರಿಸುತ್ತಿರಲಿಲ್ಲ. ಬದಲಾಗಿ ಯುವಜನರು ತನ್ನ ಕನಸುಗಳನ್ನು ಮುಂದಕ್ಕೆ ಹೊತ್ತೊಯ್ಯಬಲ್ಲ ಗೆಳೆಯರೆಂಬಂತೆ ವರ್ತಿಸುತ್ತಿದ್ದರು. ಹಾಗಾಗಿ ಅವರ ನಂತರವೂ ಕೂಡ ಅವರ ನೆನಪಿನೊಂದಿಗಿನ ಸಹಯಾನ 6 ವರ್ಷಗಳನ್ನು ಪೂರೈಸುತ್ತಿದೆ. ಆರ್. ವಿ. ಯವರ ಆಸಕ್ತಿಯ ಕ್ಷೇತ್ರಗಳಲ್ಲೊಂದಾದ ಜಾನಪದದ ಇಂದಿನ ಗೋಷ್ಠಿಗಳು ಈಗಾಗಲೇ ಔಟ್ ಡೇಟೆಡ್ ಆಗಿರುವ ಜಾನಪದ ಮೀಮಾಂಸೆಯನ್ನು ಅಪ್‍ಡೇಟ್ ಮಾಡುವ ಬಗೆಗೆ ಚಿಂತಿಸಲಿ ಎಂಬ ಆಶಯದ ನುಡಿಗಳನ್ನಾಡಿದವರು ಹಿರಿಯ ವಿಮರ್ಶಕರಾದ ಡಾ| ಎಂ.ಜಿ. ಹೆಗಡೆಯವರು. “ಜಾನಪದ ಸಾಹಿತ್ಯ, ಸಂಗೀತ, ಸಂಸ್ಕøತಿ ಇವೆಲ್ಲ ಜನಪರವಾಗಿಯೇ ಇವೆ. ವೈವಿದ್ಯಮಯ ಜನಪದವನ್ನು ಹೊಸತಲೆಮಾರು ಅರಿತು ಆಚರಿಸುವ ಮುಖಾಂತರ ದೇಶದಲ್ಲಿ ಧ್ವನಿ ಇಲ್ಲದವರಿಗೆ ಧ್ವನಿಕೊಡಬೇಕಾಗಿದೆ. ಇಂದು ಪ್ರಚಲಿತವಿರುವ ಶಿಷ್ಟರು ಮತ್ತು ಬಲಪಂಥೀಯರು ಪ್ರತಿಪಾದಿಸುವ ಏಕ ಸಂಸ್ಕøತಿ ನಮ್ಮದಲ್ಲ. ಜಾನಪದವೇ ನಮ್ಮ ನಿಜವಾದ ಸಂಸ್ಕøತಿ. ಜಾನಪದದಲ್ಲಿ ಮತ್ರ ನಿಜವಾದ ಜನಪರ ಸಂಸ್ಕøತಿ ಇದೆ. ಇಲ್ಲಿಯ ಜನಮುಖೀ ಅಂಶಗಳ ಕುರಿತು ಹೆಚ್ಚಿನ ಚರ್ಚೆ ಆಗಬೇಕಾಗಿದೆ. ಜನಪದ ಗೀತೆ ಮನರಂಜನೆಯ ಹಾಡಲ್ಲ. ಅದು ನಿಜವಾದ ಜನಜೀವನ ಎಂಬ ವಿಷಯವನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಉತ್ಸವವನ್ನು ಉದ್ಘಾಟಿಸಿದ ಪಿಚ್ಚಳ್ಳಿ ಶ್ರೀನಿವಾಸ ಹೇಳಿದರು. ಮಾತ್ರವಲ್ಲ ಅಕಾಡೆಮಿಯ ಈವರೆಗಿನ ಮಹತ್ವದ ಯೋಜನೆಗಳನ್ನು ವಿವರಿಸಿದರು. ಜಾನಪದ ಕಲೋತ್ಸವವನ್ನು ಸುಶ್ರಾವ್ಯವಾದ ಮದುವೆ ಹಾಡುಗಳನ್ನು ಹಾಡುವುದರ ಮೂಲಕ ಜಾನಪದ ಕಲಾವಿದೆ ಹನುಮಿ ಗೌಡ ಅವರು ಅರ್ಥಪೂರ್ಣವಾಗೇ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ ಡಾ. ಕೃಷ್ಣಮೂರ್ತಿ ಹನೂರು ಜಾನಪದದಲ್ಲಿ ವೈಭವೀಕರಿಸದ ಮಾನವನ ಇತಿಹಾಸ, ಪರಂಪರೆ ಕಾಣಲು ಸಾಧ್ಯ. ದಲಿತ ಬಂಡಾಯ ಮೊದಲಾದ ಚಳುವಳಿಗಳ ಮೂಲ ದ್ರವ್ಯ ಜಾನಪದದಲ್ಲಿಯೇ ಇದೆ. ಬಹುಮುಖೀ ಸಂಸ್ಕøತಿ ಬಹುಪಠ್ಯಗಳನ್ನೊಳಗೊಂಡ ಜಾನಪದದ ಅಂತರಂಗದ ಮುಖಗಳನ್ನು ಹೊಸತಲೆಮಾರು ಅರಿತುಕೊಳ್ಳಬೇಕು. ವ್ಯಾಸ ಭಾರತಕ್ಕಿಂತ ಸಿರಿಯಜ್ಜಿಯ ಭಾರತದಲ್ಲಿ ನಿಜವಾದ ಭಾರತವಿದೆ ಎಂದು ಅಭಿಪ್ರಾಯಪಟ್ಟರು. ಹಿರಿಯ ಜಾನಪದ ತಜ್ಞ ಡಾ| ಎನ್. ಆರ್. ನಾಯಕ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರಲ್ಲದೇ ಸಹಯಾನದ ಗ್ರಂಥಾಲಯಕ್ಕೆ ಪುಸ್ತಕ ಕಾಣಿಕೆಯನ್ನು ನೀಡಿದರು. ವಿಷ್ಣು ನಾಯ್ಕ, ಶಾಂತಾರಾಮ ನಾಯಕ, ಶ್ರೀಪಾದ ಭಟ್, ಬಿ ಎನ್ ಪರಡ್ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

sahayana 2

sahayana 2

ಗೋಷ್ಠಿ 1 ಜಾನಪದ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಅನುಸಂಧಾನ
ಜಾನಪದ ಅಧ್ಯಯನ ನಡೆದು ಬಂದ ದಾರಿಯ ಬಗ್ಗೆ ಮೊದಲ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದವರು ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಾಪಕರಾದ ನಿಂಗಪ್ಪ ಮುದೆನೂರು ಅವರು. ಜಾನಪದ ಅಧ್ಯಯನಕ್ಕೆ ಶತಮಾನ ತುಂಬಲಿರುವ ಈ ಹೊತ್ತಿನಲ್ಲಿ ಜಾನಪದ ಅಧ್ಯಯನ ನಡೆದು ಬಂದ ದಾರಿಯ ವಿವಿಧ ಮಜಲುಗಳನ್ನು ಕನ್ನಡ ಸಾಹಿತ್ಯದ ವಿವಿಧ ಮೈಲಿಗಲ್ಲುಗಳೊಂದಿಗೆ ತುಲನಾತ್ಮಕವಾಗಿ ವಿಶ್ಲೇಷಿಸಿದ ಅವರು ಜನಪದ ಎಂದೆಂದಿಗೂ ಜನಪರ ಕೂಡ ಆಗಿತ್ತು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಶಿಷ್ಟ ಇತಿಹಾಸ ವಿಜಯನಗರದ ವೈಭವವನ್ನು ಬಣ್ಣಿಸಿದರೆ ಕುಮಾರವ್ಯಾಸ ‘ದೊರೆಯೋ ಯಮನ ಬಂಧು, ಅವನೂಳಿಗದವರು ಉರಿವ ಬೆಂಕಿ’ಎಂದು ಬರೆದ ಬಗೆಯನ್ನು ತಿಳಿಸಿದರು. ಪುರಂದರದಾಸರು ಜನರ ದನಿಯಾಗಿ ದೊರೆಯ ವೈಭವವನ್ನು ಎಲ್ಲ ಲೊಳಲೊಟ್ಟೆ ಎಂದಿರುವುದನ್ನೂ ನಾವು ಗಮನಿಸಬೇಕು ಎಂದರು.
ಅಧ್ಯಯನದ ಇತ್ತೀಚಿನ ಒಲವುಗಳು ಮತ್ತು ಹೊಸಮಾರ್ಗಗಳ ಬಗ್ಗೆ ಉತ್ಸಾಹಭರಿತರಾಗಿ ಮಾತನಾಡಿದವರು ಯುವ ಜಾನಪದ ಸಂಶೋಧಕರಾದ ಅರುಣ ಜೋಳದ ಕೂಡ್ಲಿಗಿಯವರು. ಜಾನಪದ ಬದುಕಿಗಿಂತ ಬೇರೆಯಲ್ಲ. ಬದುಕಿನ ಮೂಸೆಯಲ್ಲಿ ಅರಳಬೇಕಾದ ಜಾನಪದ ಜೀವನಶೈಲಿ ಬದಲಾದಂತೆ ತನ್ನ ಸ್ವರೂಪವನ್ನೂ ಬದಲಾಯಿಸಿಕೊಳ್ಳುತ್ತದೆ. ಹಾಗಾಗಿ ಬದಲಾದ ಹೊಸ ಜೀವನಶೈಲಿ ಹುಟ್ಟು ಹಾಕಿರುವ ಹೊಸಸ್ವರೂಪದ ಜಾನಪದವನ್ನು ತೆರೆದ ಕಣ್ಣಿನಿಂದ ನೋಡಬೇಕಾದ ಅಗತ್ಯವಿದೆ ಎಂಬುದನ್ನವರು ಸೊಗಸಾದ ಉದಾಹರಣೆಗಳ ಮೂಲಕ ವಿವರಿಸಿದರು. ಎಪ್ಪತ್ತೈದು ವರ್ಷಗಳ ಸಿನೆಮಾ ಇತಿಹಾಸವನ್ನು ಜನರ ಬಾಯಿಂದ ಸಂಗ್ರಹಿಸಿದರೆ ನೈಜವಾದ ಚಿತ್ರಣ ಸಿಗುತ್ತಿತ್ತು. ಅನುಭವಿ ನಿರ್ದೇಶಕರು ಕುಳಿತು ಬರೆಯಬೇಕಾದ ವಿಷಯವಲ್ಲ ಅದು. ಹಾಗೆಯೇ ಪ್ರಾಮಾಣಿಕ ಅಧಿಕಾರಿಗಳ ಬಗ್ಗೆ ಹೊಸಕಾಲದ ಲಾವಣಿಗಳು ರೂಪುಗೊಳ್ಳುತ್ತಿರುವುದನ್ನೂ ನಾವು ನೋಡಬಹುದು. ಜನಪದ ವೈದ್ಯದಂತಹ ಸಂಗತಿಗಳಿಂದು ಹೊಸಕಾಲದ ಅಗತ್ಯಗಳಿಗೆ ತಕ್ಕಂತ ಮಾರ್ಪಾಡುಗಳನ್ನು ಪಡೆದುಕೊಳ್ಳುತ್ತಿವೆ ಎಂದರು. ಚರ್ಚೆಯಲ್ಲಿ ಪಾಲ್ಗೊಂಡ ಸುಮುಖಾನಂದ ಜಲವಳ್ಳಿಯವರು ಹೊಸಕಾಲದ ಜನಪದ ಕಾಲದ ಹೊಡೆತಕ್ಕೆ ಸಿಕ್ಕಿ ಮಾಗುವ ಮೊದಲೇ ಸಂಗ್ರಹಿಸಿ ವೈಭವೀಕರಿಸುವುದು ಸರಿಯೇ ಎಂಬ ಸಂಶಯವನ್ನು ಮುಂದಿಟ್ಟರು. ಜಾನಪದ ಸಂಶೋಧಕರು ಹೆಚ್ಚುತ್ತಿರುವುದು ಅದರ ಸಂಶೋಧನೆ ಸರಳ ಮತ್ತು ಸುಲಭವಾಗಿರುವುದರಿಂದಲೇ ಹೊರತು ಅದರ ಮೇಲಿನ ನೈಜ ಆಸಕ್ತಿಯಿಂದಲ್ಲ ಎಂಬ ಕಳವಳಕಾರಿ ಸಂಗತಿಯನ್ನೂ ಅರುಣ ಮುಂದಿಟ್ಟು ಯುವಜನರ ಜಾನಪದದ ಆಸಕ್ತಿಯ ಗುಟ್ಟನ್ನು ತೆರೆದಿಟ್ಟರು.
udghatane

ಗೋಷ್ಠಿ 2 ಜಾನಪದ: ಜ್ಞಾನ ಮತ್ತು ಅಭಿವೃದ್ಧಿಯ ನೆಲೆಗಳು
ಜಾನಪದ – ಅಭಿವೃದ್ಧಿಯ ನೆಲೆಗಳ ಬಗ್ಗೆ ಪ್ರಭಾವಯುತವಾಗಿ ಮಾತನಾಡಿದವರು ಚಂದ್ರು ಪೂಜಾರಿಯವರು. ಜಾನಪದವೆಂದರೆ ಸಮೃದ್ಧಿ, ಜಾನಪದವೆಂದರೆ ಶಾಂತಿ. ಜಾನಪದವೆಂದರೆ ಪ್ರತಿರೋಧದ ನೆಲೆ ಎಂಬುದೆಲ್ಲ ಬರಿಯ ಬಾಯಿ ಮಾತಿನ ಸಂಗತಿಗಳು ಎಂಬುದನ್ನು ಸೂಕ್ತ ಉದಾಹರಣೆಗಳ ಮೂಲಕ ವಿವರಿಸಿದ ಅವರು ರಾಜಕೀಯದ ಭಾಗವಾಗದೇ ಅಭಿವೃದ್ಧಿಯೆಂಬುದು ಇಲ್ಲಿ ಖಂಡಿತ ಸಾಧ್ಯವಿಲ್ಲ ಎಂದರು. ಜಾನಪದ ಅಭಿವೃದ್ಧಿಯ ಸೆಲೆಯಾದರೆ ಅದರ ಭಾಗವಾದ ಸಹಜ ಕೃಷಿ ದೇಸೀಯ ಭಾಷೆ. ಸಾಮಾನ್ಯ ಶಿಕ್ಷಣ ಮತ್ತು ಪಾರಂಪರಿಕ ಉದ್ಯಮಗಳನ್ನು ನಂಬಿದವರ ಉದ್ಧಾರವಾಗಬೇಕಾಗಿತ್ತು. ಆದರೆ ಇಂದು ಅಭಿವೃದ್ಧಿ ಅದರ ವಿರುದ್ಧ ನೆಲೆಯಲ್ಲಿದೆ. ತುಳುನಾಡಿನ ಭೂತಾರಾಧನೆ ಪ್ರತಿರೋಧದ ನೆಲೆಯಲ್ಲ. ಬದಲಾಗಿ ಈಗಿರುವ ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಬಲಗೊಳಿಸುವ ಹುನ್ನಾರವಾಗಿದೆ ಎಂದರು. ಹಾಗಾಗಿ ಜಾನಪದವನ್ನು ಕೇವಲ ಭಾವನಾತ್ಮಕ ನೆಲೆಯಲ್ಲಿ ನೋಡದೇ ವಾಸ್ತವದ ಬೆಳಕಲ್ಲಿ ಹುಡುಕಬೇಕಾಗಿದೆ ಎಂದರು.
ಜಾನಪದದ ಪಾರಂಪರಿಕ ಜ್ಞಾನವ್ಯವಸ್ಥೆಗಳ ಬಗ್ಗೆ ಸಮ್ಮೇಳನಾಧ್ಯಕ್ಷರಾದ ಕೃಷ್ಣಮೂರ್ತಿ ಹನೂರ ಅವರು ವಿದ್ವತ್ಪೂರ್ಣವಾಗಿ ಮಾತನಾಡಿದರು. ಜಾನಪದವನ್ನು ವಾಸ್ತವದ ನೆಲೆಯಲ್ಲಿ ಕಂಡುಕೊಳ್ಳುತ್ತಲೇ ಅದು ನೀಡುವ ಜ್ಞಾನಾತ್ಮಕ ನಿರೂಪಣೆಗಳ ಬಗೆಗೂ ಚಿಂತಿಸಬೇಕಾದ ವಿಷಯಗಳ ಬಗ್ಗೆ ಗಮನ ಸೆಳೆದರು. ಜನಪದೀಯ ನಂಬಿಕೆಗಳು ಎಷ್ಟು ಆಳವಾಗಿ ಬೇರೂರಿರುತ್ತವೆಯೆಂದರೆ, ವಾಸ್ತವದ ಯಾವ ಮಾರ್ಪಾಡೂ ಅದನ್ನು ಬದಲಾಯಿಸಲಾರದು ಎಂಬುದನ್ನು ತಿರುಪತಿ ತಿಮ್ಮಪ್ಪ ಶ್ರೀನಿವಾಸನಾದ ಉದಾಹರಣೆಯ ಮೂಲಕ ವಿವರಿಸಿದರು. ನಂತರ ಜಾನಪದೀಯ ನಂಬಿಕೆಗಳು ವೈದಿಕ ಸಂಸ್ಕøತಿಯ ಕಡೆಗೆ ವಾಲುತ್ತಿರುವುದರ ಬಗ್ಗೆ ಪ್ರೇಕ್ಷಕರು ಅವರೊಂದಿಗೆ ಸುಧೀರ್ಘವಾದ ಚರ್ಚೆಯನ್ನು ಮಾಡಿದರು. ಇಂದಿನ ಗೋಷ್ಠಿ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೂ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿರುವುದೇ ಅದರ ಸಾರ್ಥಕ್ಯವೆಂದು ಸಹಯಾನದ ವಿಠ್ಠಲ ಭಂಡಾರಿಯವರು ಚರ್ಚೆಗೆ ಪೂರ್ಣವಿರಾಮವನ್ನಿತ್ತರು.
ಕವಿಗೋಷ್ಠಿ
ಬಳಿಕ ನಡೆದ ಕವಿಗೋಷ್ಠಿಯಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಕವಿಗಳಾದ ಸುನಂದಾ ಕಡಮೆ, ರಾಜು ಹೆಗಡೆ, ಮಮತಾ ಅರಸಿಕೆರೆ, ಪಾಲ್ಗುಣ ಗೌಡ, ಶ್ರೀದೇವಿ ಕೆರೆಮನೆ, ಸುಕನ್ಯಾ ದೇಸಾಯಿ, ಜಯಶೀಲ ಆಗೇರ, ಪಿ.ಬಿ.ಪ್ರಸನ್ನ, ಸುಧಾ ಆಡುಕಳ,ಯಮುನಾ ಗಾಂವ್ಕರ್, ಗೀತಾ ವಸಂತ ಮುಂತಾದವರು ತಮ್ಮ ಕವನಗಳನ್ನು ವಾಚಿಸಿದರು. ಹಗರಿಬೊಮ್ಮನಹಳ್ಳಿಯಿಂದ ಆಗಮಿಸಿದ ಸುಧಾ ಚಿದಾನಂದ ಗೌಡ ಆಶಯ ನುಡಿಗಳನ್ನಾಡಿದರು. ಮಾಧವಿ ಭಂಡಾರಿಯವರ ನಿರೂಪಣೆಯಲ್ಲಿ ಮೂಡಿಬಂದ ಕವಿಗೋಷ್ಠಿ ಹೆಣ್ಣಿನ ತವಕ ತಲ್ಲಣ, ಪ್ರಸ್ತುತ ವಿಷಯಗಳ ವಿಶ್ಲೇಷಣೆ, ಪ್ರೇಮಕವನಗಳ ಮೂಲಕ ನೆರೆದವರಿಗೆ ಮುದ ನೀಡಿತು. ಇದನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಪ್ರಾಯೋಜಿಸಿತ್ತು.
ನಾಡು ಕಂಡ ಅತ್ಯಂತ ಪ್ರಗತಿಶೀಲ ಇತಿಹಾಸಕಾರ್ತಿ ವಸು ಮಳಲಿಯವರ ನೆನಪಿನಲ್ಲಿ ಆಯೋಜನೆಗೊಂಡ ಗೋಷ್ಠಿಗಳು ಅವರ ಆಶಯದ ನೆಲೆಯಲ್ಲಿಯೇ ನಡೆದವು. ನಮ್ಮ ದೇಶದ ಚಿಂತಕರಲ್ಲಿಯೇ ಮೊದಲ ಸ್ಥಾನದಲ್ಲಿ ನಿಂತಿರುವ ಡಾ| ಪುರುಷೋತ್ತಮ ಬಿಳಿಮಲೆಯವರು ಅನಾರೋಗ್ಯದ ಕಾರಣದಿಂದ ಬರಲಾಗದಿದ್ದರೂ ಅಮೂಲ್ಯವಾದ ವಿಷಯವನ್ನೊಳಗೊಂಡ ಭಾಷಣವನ್ನು ಕಳಿಸಿದ್ದು, ಅದನ್ನು ಅಷ್ಟೇ ಭಾವಪೂರ್ಣವಾಗಿ ಡಾ|| ಶ್ರೀಪಾದ ಭಟ್ ಅವರು ವಾಚಿಸಿರು. ದೇಶಕ್ಕೆ ದೇಶವೇ ಪ್ರಜಾಪ್ರಭುತ್ವದ ನೆರಳಿನಲ್ಲಿಯೇ ಏಕಸಂಸ್ಕøತಿ ಮತ್ತು ಏಕನಾಯಕತ್ವದ ಕಡೆಗೆ ತುಡಿಯುತ್ತಿರುವ ಇಂದಿನ ವಿಷಮ ಸನ್ನಿವೇಶದಲ್ಲಿ ಬಹುತ್ವವೇ ಉಸಿರಾಗಿರುವ ಜನಪದದ ಮೂಲಕವೇ ಪ್ರತಿರೋಧವನ್ನು ಸಂಘಟಿಸಬೇಕಾದ ಅವಶ್ಯಕತೆಯನ್ನು ಅವರ ಭಾಷಣ ಸವಿವರವಾಗಿ ಪ್ರತಿಪಾದಿಸಿತು.
oormilaಸಮಾರೋಪ
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಡಾ.ಎಚ್.ಎಸ್. ಅನುಪಮ ಸುಸ್ಥಿರ ಬದುಕಿನ ಹೆಸರಲ್ಲಿ ಕಾಯಕಜೀವಿಗಳನ್ನು ಮತ್ತಷ್ಟು ಕೆಳಮಟ್ಟಕ್ಕೆ ದೂಡುವ ಮುನ್ನ ಅದರ ಬಗ್ಗೆ ದೂರಗಾಮಿ ಚಿಂತನೆ ಅಗತ್ಯ ಎಂದರು. ಪ್ರತಿ ಊರಿನಲ್ಲಿರುವ ವರ್ಗ ಶೋಷಣೆಯನ್ನು ನಿವಾರಿಸುವ ಕುರಿತು ಮೊದಲು ಯೋಚಿಸಬೇಕಾಗಿದೆ. ಜಾನಪದ ವೈದ್ಯದ ಹೆಸರಲ್ಲಿ ನಡೆಯುವ ದುರಂತಗಳ ಬಗ್ಗೆ ಮಾಹಿತಿ ನೀಡಿದರು. ಜಾನಪದ ಅಂಟಿಕ್ ಎಂಬ ಅಲಂಕಾರವಾಗದೇ ಅದು ಬದುಕಿನ ಶೈಲಿಯಾದಾಗ ಮಾತ್ರ ಸರಳ ಜೀವನ, ಸುಸ್ಥಿರ ಜೀವನ ಸಾಧ್ಯ. ಮಹಿಳೆಯರ ದೃಷ್ಟಿಯಲ್ಲಿ ಜಾನಪದವನ್ನು ನೋಡುವುದಾದರೆ ಅಲ್ಲಿಯ ಹಾಡು-ಆಚರಣೆಗಳಲ್ಲಿ ಮಹಿಳಾ ವಿರೋಧಿ ಅಂಶಗಳೇ ಹೆಚ್ಚಾಗಿವೆ. ಇವುಗಳ ಮಧ್ಯೆ ಇರುವ ಕೆಲವಾದರೂ ಮಹಿಳಾ ಪ್ರತಿರೋಧದ ನೆಲೆಗಳನ್ನು ಹೆಕ್ಕಿ ತೆಗೆಯಬೇಕಾಗಿದೆ ಎಂದರು. ಜಾನಪದ ವಿದ್ವಾಂಸರಿಗಿಂತ ಜಾನಪದ ಕಲಾವಿದರ, ಜನಸಾಮಾನ್ಯರ ಬದುಕನ್ನು ಕೇಂದ್ರವಾಗಿಸಿಕೊಂಡು ನಮ್ಮ ಅಧ್ಯಯನಗಳು ನಡೆಯಬೇಕಾಗಿದೆ.ಜನಪದ ಮತ್ತು ಜನಪರ ಇವೆರಡು ಬೇರೆಬೇರೆಯಲ್ಲ ಎಂದು ಹೇಳಿದವರು ಅಧ್ಯಕ್ಷತೆ ವಹಿಸಿದ್ದ ಪಿಚ್ಚಳ್ಳಿಯವರು. ಇಂಥಹ ಗ್ರಾಮೀಣ ಪ್ರದೇಶದಲ್ಲಿ ಇಷ್ಟೊಂದು ಸುವ್ಯವಸ್ಥಿತವಾಗಿ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆದಬಗ್ಗೆ ಅಚ್ಚರಿ ವ್ಯಕ್ತ ಪಡಿಸಿದರು.ಮತ್ತು ಆರ್ ವಿ ಭಂಡಾರಿಯವರೊಂದಿಗಿನ ತನ್ನ ಸಂಬಂಧವನ್ನು ನೆನಪಿಸಿಕೊಂಡರು. ಅಕಾಡೆಮಿಯ ರಜಿಸ್ಟ್ರಾರ್ ಬಿ.ಎನ್. ಪರೆಡ್ಡಿಯವರು, ಸದಸ್ಯರಾದ ಜೂಲಿಯಾನ ಪರ್ನಾಂಡೀಸ್ ಅವರು ಉಪಸ್ಥಿತರಿದ್ದರು.
ಜಾನಪದ ಕಲೋತ್ಸವದಲ್ಲಿ ರಾಜ್ಯಪ್ರಶಸ್ತಿ ವಿಜೇತ ಕಲಾವಿದ ಪ್ರಭಾಕರ ಭಂಡಾರಿ ಕರ್ಕಿ ಸಂಗಡಿಗರಿಂದ ಪಂಚವಾದ್ಯ, ಹಳದೀಪುರದ ರಮೇಶ ಗೌಡ ಮತ್ತು ಸಂಗಡಿಗರಿಂದ ಹಾಲಕ್ಕಿ ಸುಗ್ಗಿ, ಹಳಿಯಾಳದ ಬಾಬು ಮಯ್ಯಾ ಕರಾತ್ ಸಂಗಡಿಗರಿಂದ ಗೌಳೀ ಕುಣಿತ ಮತ್ತು ತೊಳಸಾಣಿಯ ನಾರಾಯಣ ಮರಾಠಿ ಮತ್ತು ಸಂಗಡಿಗರ ಕೋಲಾಟ- ಪ್ರದರ್ಶನ ಪ್ರೇಕ್ಷಕರನ್ನು ವೈವಿಧ್ಯಪೂರ್ಣ ಜಾನಪದ ಲೋಕಕ್ಕೆ ಕೊಂಡೊಯ್ದಿತು.
ಜಾನಪದ ಶೈಲಿಯ ಹಲಸಿನ ಹಣ್ಣಿನ ಸುಟ್ಟೇವು, ಹಲಸಿನಗುಜಕಿಯ ಪದಾರ್ಥ,ಗೋಧಿಕಡಿಯ ಪಾಯಸ, ನುಗ್ಗೆ ಸೊಪ್ಪಿನ ತಂಬುಳಿ,ಉದ್ದಿನ ಹಪ್ಪಳ, ಮಿಡಿ ಉಪ್ಪಿನಕಾಯಿ, ಮಾವಿನಕಾಯಿಯ ಅಪ್ಪುಳಿ, ಕಲ್ಲಂಗಡಿ ಹಣ್ಣಿನ ಜ್ಯೂಸ್, ಸಭಿಕರ ಮನಸೂರೆಗೈದವು. ಸಹಯಾನ ಸಾಹಿತ್ಯೋತ್ಸವ ನಿಜಕ್ಕೂ ಸಮಾನತೆಯನ್ನು ಬಯಸುವ ಸಮಾನ ಮನಸ್ಕರ ನಿರಂತರ ಸಹಯಾನವಾಗಿದೆ.
-ಸುಧಾ ಆಡುಕಳ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s