ಸಮುದಾಯದ ಇತಿಹಾಸ

ಎಪ್ಪತ್ತರ ದಶಕದಲ್ಲಿ ಕನ್ನಡ ನಾಡಿನ ಸಾಂಸ್ಕøತಿಕ ರಂಗದಲ್ಲಿ ಹೊಸ ಆಲೋಚನೆಗಳನ್ನು ಬಿತ್ತಿ, ವಿಭಿನ್ನ ಪ್ರಯೋಗಗಳನ್ನು ನಡೆಸಿ ಸಂಚಲನ ಮೂಡಿಸಿದ ‘ಸಮುದಾಯ’ ಈಗ 40ರ ಹೊಸ್ತಿಲಲ್ಲಿದೆ. 40 ವರ್ಷಗಳ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಳ್ಳಲಿದೆ. ಅದುವೇ ಸಮುದಾಯ ಕರ್ನಾಟಕ ರೆಪರ್ಟರಿ. ಸಮುದಾಯದ ಸಂಸ್ಥಾಪಕ ಹಿರಿಯರ ಕನಸಾಗಿತ್ತು ಇದು. ‘ಕಟ್ಟುವೆವು ನಾವು ಹೊಸ ನಾಡೊಂದನು . .” ಎನ್ನುವ ಮಹತ್ವಾಕಾಂಕ್ಷಿ ಯೋಜನೆಯೊಂದಿಗೆ ಆರೋಗ್ಯಕರ ಸಮಾಜವೊಂದನ್ನು ನಿರ್ಮಾಣ ಮಾಡಲು ಆಗ ಸಾಂಸ್ಕøತಿಕ ಜಾತಾಗಳನ್ನು ಹಮ್ಮಿಕೊಂಡು ರಾಜ್ಯದ ಹಳ್ಳಿ ಹಳ್ಳಿಗೆ ಯುವಪಡೆಯನ್ನು ಕೊಂಡೊಯ್ದ ಹೆಗ್ಗಳಿಕೆ ‘ಸಮುದಾಯ’ದ್ದು. ಈಗ ಸಮುದಾಯ ಕರ್ನಾಟಕ ರೆಪರ್ಟರಿ ಮೂಲಕ ಯುವಜನರ ತಂಡ ನಾಡಿನ ಉದ್ದಗಲಕ್ಕೂ ಸಂಚರಿಸಲು ಸಿದ್ಧವಾಗುತ್ತಿದೆ.
ಸಮುದಾಯದ ಇತಿಹಾಸ
‘ಕಲೆಗಾಗಿ ಕಲೆ ಅಲ್ಲ ಬದುಕಿಗಾಗಿ ಕಲೆ’
ಸಮೂಹದ ಕನಸುಗಳನ್ನು ಸಾಂಸ್ಕøತಿಕ ಅಭಿವ್ಯಕ್ತಿಯ ಮೂಲಕ ಪಸರಿಸುವ, ಪ್ರಜಾಪ್ರಭುತ್ವದ ಆಶಯಗಳನ್ನು ಜನಮಾನಸದಲ್ಲಿ ಕಲಾಭಿವ್ಯಕ್ತಿಯ ಮೂಲಕ ಬಿತ್ತುವ ಕನಸಾಗಿ ಹುಟ್ಟಿದ್ದು ಸಮುದಾಯ. 1975ರ ಆಂತರಿಕ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಸೆಟೆದ ಮನಸ್ಸುಗಳು ಒಂದೆಡೆ ಸೇರಿ ಪ್ರತಿರೋಧದ ಮಾರ್ಗಗಳನ್ನು ಹುಡುಕುವಾಗ ಜನಸಮುದಾಯದ ಸಾಕ್ಷಿಪ್ರಜ್ಞೆಯಾಗಿ, ಸಾಂಸ್ಕøತಿಕ ನೆಲೆಯಲ್ಲಿ ಕೆಲಸ ಮಾಡುವ ಸಂಘಟನೆಯಾಗಿ ಮೂಡಿಬಂದ ಹೆಸರು ‘ಸಮುದಾಯ’.
ತನ್ನ ಮೊದಲ ಹೆಜ್ಜೆಗಳಲ್ಲಿಯೇ ಸೌಹಾರ್ದ ಪರಂಪರೆಯನ್ನು ಉಳಿಸಿ ಬೆಳೆಸುವ, ಅದಕ್ಕೆ ಅಗತ್ಯವಾದ ಸಾಂಸ್ಕøತಿಕ ಪರಿಸರವನ್ನು ಕಟ್ಟಿ ಬೆಳೆಸಲು ಸಮುದಾಯ ಬದ್ಧವಾಗಿತ್ತು. ಸತತ ಸಾಂಸ್ಕøತಿಕ ಮಧ್ಯಪ್ರವೇಶದ ಮೂಲಕ ವಿಮರ್ಶಾತ್ಮಕ ಪ್ರಜ್ಞೆಯನ್ನು ಮೂಡಿಸಿ ಬೆಳೆಸುವ ಆಶಯವನ್ನು ಕಟ್ಟಿಕೊಂಡಿತು. ‘ಕಲೆಗಾಗಿ ಕಲೆ ಅಲ್ಲ ಬದುಕಿಗಾಗಿ ಕಲೆ’ ಎಂಬುದನ್ನು ತನ್ನ ಘೋಷ ವಾಕ್ಯವಾಗಿಟ್ಟುಕೊಂಡು ಜನಜಾಗೃತಿಯತ್ತ ಮುಂದಾಯಿತು.
ಸಮಾಜ ಸದೃಢಗೊಳ್ಳಬೇಕು, ಕ್ರಿಯಾಶೀಲವಾಗಬೇಕು, ಸದಾಕಾಲವೂ ತಂಟೆ ತಕರಾರುಗಳು, ಓರೆಕೋರೆಗಳು ಇದ್ದೇ ಇರುತ್ತಾವಾದರೂ ಆ ಕಾಲದ ಅಗತ್ಯಕ್ಕನುಗುಣವಾದ ಚಟುವಟಿಕೆ, ಚಲನಶೀಲತೆಯನ್ನು ಮೈಗೂಡಿಸಿಕೊಂಡು ಏರು ಪೇರುಗಳನ್ನು ರೂಕ್ಷಿಸಿ ಸರಿಪಡಿಸುವುದು ತನ್ನ ಕೆಲಸವಾಗಬೇಕೆಂಬ ಹೆಬ್ಬಯಕೆಯಿಂದ ಸಮುದಾಯ ಮುನ್ನಡಿಯಿಟ್ಟಿತು. ಜನರನ್ನು ತಲುಪಲು ಬಡಿದೆಬ್ಬಿಸಲು ಪ್ರಮುಖ ಮಾಧ್ಯಮವಾಗಿ ರಂಗಭೂಮಿಯನ್ನು ಆಯ್ಕೆ ಮಾಡಿಕೊಳ್ಳಲಾಯಿತಾದರೂ ಅದಷ್ಟಕ್ಕೇ ತನ್ನ ಕಾರ್ಯಕ್ಷೇತ್ರವನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ತುರ್ತುಪರಿಸ್ಥಿತಿಯ ಕರಾಳತೆಗೆ ಸಾಂಸ್ಕøತಿಕ ಪ್ರತಿರೋಧವಾಗಿ ಹುಟ್ಟಿದ ಅಭಿವ್ಯಕ್ತಿ, ತುರ್ತುಪರಿಸ್ಥಿತಿ ಕೊನೆಗೊಂಡ ಮಾತ್ರಕ್ಕೆ ನೇಪಥ್ಯಕ್ಕೇನೂ ಸರಿಯಲಿಲ್ಲ. ಬದಲಿಗೆ ರಂಗಭೂಮಿ ಮತ್ತು ಅದರ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವ ಸಾಹಿತ್ಯ, ಕಲೆ, ಸಂಗೀತ ಇವೆಲ್ಲವುಗಳ ಸಾರ ಸರ್ವಸ್ವವನ್ನು ಅಂತರ್ಗತಗೊಳಿಸಿಕೊಂಡು ಮುನ್ನಡೆಯುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಯನ್ನು ರೂಪಿಸಿಕೊಂಡಿತು. 70 -80 ರ ದಶಕದಲ್ಲಿ ಸಮುದಾಯ ರಂಗಭೂಮಿಗೆ ರಾಜಕೀಯ ಪರಿಭಾಷೆ ನೀಡಿತು. ಜನಸಮೂಹದ ಬದುಕಿನ ಅಗತ್ಯಗಳು, ಮೇಲ್ ಹಂತದ ಕೆಲವು ಜನರ ಅಗತ್ಯಗಳನ್ನು ಮೀರಿದ್ದಾಗಿರಬೇಕು. ಕಟ್ಟುವ ಜನರ ಅಗತ್ಯಗಳು ಮೆಟ್ಟುವ ಜನರ ಅಗತ್ಯಗಳಿಗಿಂತ ಹೆಚ್ಚು ಪ್ರಮುಖವಾಗಬೇಕು. ಅದರತ್ತ ಪ್ರಭುತ್ವದ ಗಮನ ಹರಿಯಬೇಕು ಎಂಬುದು ಸಮುದಾಯದ ಇಚ್ಚೆ. ವ್ಯವಸ್ಥೆಯನ್ನು ಪ್ರಶ್ನಿಸುವ, ಅವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಇರಾದೆ ಹೊಂದಿರುವ ಸಮುದಾಯ ತನ್ನ ಪ್ರಾರಂಭದಿಂದಲೂ ಪಾಂಡಿತ್ಯ ಪ್ರದರ್ಶನಕ್ಕಿಂತ ಬದ್ಧತೆ ಪ್ರಬುದ್ಧತೆಗೆ ಹೆಚ್ಚು ಗಮನ ನೀಡುತ್ತ ಬಂದಿದೆ.
ಸಾಮಾಜಿಕ, ರಾಜಕೀಯ, ಆರ್ಥಿಕ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಮತ್ತು ಅದಕ್ಕೆ ಅಗತ್ಯವಾದ ವಿವಿಧ ಮಾಧ್ಯಮಗಳನ್ನು ಸಶಕ್ತವಾಗಿ ಬಳಸಿಕೊಳ್ಳಲು, ಎಲ್ಲ ವಿಭಾಗಗಳನ್ನೂ ತಲುಪಲು ಸಭೆ, ಸಮಾರಂಭ, ಚರ್ಚೆ, ವಿಚಾರಸಂಕಿರಣಗಳು, ಗೋಷ್ಟಿಗಳನ್ನು ನಡೆಸುತ್ತ ಬಂದಿದೆ. ಕಲೆ ಸಾಹಿತ್ಯ ಸಂಗೀತಗಳು ರಂಗಭೂಮಿಯ ಅವಿಭಾಜ್ಯ ಅಂಗಗಳಾಗಿದ್ದು ರಂಗಪ್ರಯೋಗಗಳಲ್ಲಿ ಅವೆಲ್ಲವೂ ಒಳಗೊಂಡೇ ಇರುತ್ತವೆಯಾದರೂ, ಆ ಪ್ರತೀ ವಲಯವನ್ನೇ ಗಮನದಲ್ಲಿಟ್ಟುಕೊಂಡು ನಿರ್ದಿಷ್ಟ ಕಾರ್ಯಕ್ರಮಗಳನ್ನೂ ನಿರಂತರವಾಗಿ ನಡೆಸಿಕೊಂಡು ತನ್ನ ನಾಲ್ಕು ದಶಕಗಳನ್ನು ಯಶಸ್ವಿಯಾಗಿ ಪೂರೈಸಿದೆ.

ಸೆಂಟ್ರಲ್ ಕಾಲೇಜಿನ ಹುಲ್ಲು ಹಾಸಿನ ಮೇಲೆ ಸಮಾನ ಸಾಂಸ್ಕøತಿಕ ಮನಸ್ಸುಗಳು ಸೇರಿ ಚರ್ಚಿಸುವಾಗ ಎಲ್ಲರ ಪ್ರೀತಿ ಪಾತ್ರ ಮೇಷ್ಟ್ರು ಕಿ.ರಂ.ನಾಗರಾಜ್ ಸೂಚಿಸಿದ ಹೆಸರು ‘ಸಮುದಾಯ’ ಎಂದು ಆ ಸಂದರ್ಭದಲ್ಲಿ ಅಲ್ಲಿದ್ದ ಅನೇಕ ಗೆಳೆಯರು ನೆನೆಸಿಕೊಳ್ಳುತ್ತಾರೆ.
ಸಮುದಾಯದ ಮೊದಲ ನಾಟಕ ಹುತ್ತವ ಬಡಿದರೆ. ಕೇವಲ ಹುತ್ತವನ್ನು ಬಡಿದರೆ ಹಾವು ಸಾಯುವುದಿಲ್ಲ. ದುಷ್ಟನೆಂದು ರಾಜನನ್ನು ಕೊಂದರೆ ಕೆಟ್ಟ ವ್ಯವಸ್ಥೆ ಬದಲಾಗುವುದಿಲ್ಲ. ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ಯಷ್ಟೇ ಜನರ ಬದುಕಿನಲ್ಲಿ ಬದಲಾವಣೆ ತರಬಲ್ಲುದು ಎಂಬ ಸಂದೇಶದ ಮೂಲಕ ಸಮುದಾಯ ತನ್ನ ಸಾಮುದಾಯಿಕ ಬದ್ಧತೆ ಮತ್ತು ಚಿಂತನೆಯನ್ನು ಸ್ಪಷ್ಟಪಡಿಸಿಕೊಂಡಿದೆ.
ಸಮುದಾಯ ಹುಟ್ಟಿದ್ದು ಬೆಂಗಳೂರಿನಲ್ಲಿಯಾದರೂ, ಅದರ ಕಾರ್ಯಕ್ಷೇತ್ರ ಕೇವಲ ರಾಜಧಾನಿಗೆ ಸೀಮಿತವಾಗಿ ಉಳಿಯಲಿಲ್ಲ. ಒಂದೆರಡು ವರ್ಷಗಳಲ್ಲೇ ಮೈಸೂರು, ತುಮಕೂರು, ಮಂಗಳೂರಿನಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಆಸಕ್ತರನ್ನು ತನ್ನೆಡೆಗೆ ಸೆಳೆಯುವಲ್ಲಿ ಸಮುದಾಯ ಶಕ್ತವಾಯಿತು. 77 ರ ನಂತರ ಧಾರವಾಡ, ರಾಯಚೂರು ಮುಂತಾಗಿ ಕರ್ನಾಟಕದ ಉತ್ತರ ಭಾಗಕ್ಕೂ ಹಬ್ಬಿತು. 78 ರಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಘಟಕಗಳ ಮಧ್ಯೆ ಸಮನ್ವಯತೆಗಾಗಿ ರಾಜ್ಯಮಟ್ಟದ ಸಮನ್ವಯ ಸಮಿತಿ ರೂಪುಗೊಂಡು ಕಾರ್ಯನಿರ್ವಹಿಸಲುಪಕ್ರಮಿಸಿತು. ಇದೊಂದು ರಂಗ ಚಳುವಳಿಯಾಗಿ ಮುಂದುವರೆಯುವ ತನ್ನ ಸಂಕಲ್ಪಕ್ಕೆ ಸಾಂಸ್ಥಿಕ ಪರಿಕಲ್ಪನೆಯನ್ನೂ ಸ್ಪಷ್ಟಪಡಿಸಿಕೊಂಡಿತು.
ಬ್ರೆಕ್ಟ್‍ನ ಮುಕ್ತ ರಂಗಭೂಮಿ ಹಾಗೂ ಬಾದಲ್ ಸರ್ಕಾರರ ಮೂರನೆಯ ರಂಗಭೂಮಿಯ ಸಂಗಮವಾದ ಬೀದಿ ನಾಟಕಗಳ ಮೂಲಕ ಜನರನ್ನು ಬಾಧಿಸುವ ಸಮಸ್ಯೆಗಳನ್ನು ಕುರಿತು ಜನರೊಡನೆ ಸಂವಹಿಸುವ ಕೆಲಸವನ್ನು ಮೊದಲ ದಿನಗಳಿಂದಲೇ ಸಮುದಾಯ ಮಾಡುತ್ತ ಬಂದಿದೆ. ಬೀದಿ ನಾಟಕವನ್ನು ಕೂಡ ಕೇವಲ ಪ್ರಚಾರ ಮಾಧ್ಯವiವಾಗಿ ಬಳಸದೇ, ಕಲಾಭಿವ್ಯಕ್ತಿಯ ಮೂಲಕ ಗಮನ ಸೆಳೆಯುವ ಪ್ರಬಲ ಅಸ್ತ್ರವನ್ನಾಗಿ ಪ್ರಚುರ ಪಡಿಸುವಲ್ಲಿ ಸಮುದಾಯ ಯಶಸ್ವಿಯಾಗಿದೆ. ಬಿಹಾರದ ಬೆಲ್ಚಿಯ ದಲಿತರ ಸಜೀವ ದಹನ, ಕರ್ನಾಟಕದ ಪತ್ರೆ ಸಂಗಪ್ಪನ ಕೊಲೆಯಂಥಹ ಪ್ರಕರಣಗಳನ್ನೆತ್ತಿಕೊಂಡು ಉಳ್ಳವರ ಅಟ್ಟಹಾಸದೆದುರು ಧ್ವನಿಇಲ್ಲದವರು ಅಸಹಾಯಕರಾಗುವ, ಆದರೆ ಒಂದು ಸಶಕ್ತ ರಂಗಭೂಮಿ ಇದನ್ನು ಹೇಗೆ ಸಮರ್ಥವಾಗಿ ಜನರೆಡೆಗೆ ಒಯ್ಯಬಲ್ಲುದು ಎಂಬುದನ್ನು ಸಮುದಾಯ ತೋರಿಸಿಕೊಟ್ಟಿತು.
1979 ರಲ್ಲಿ ಹೊಸ ಮೌಲ್ಯಗಳನ್ನು ಹೊತ್ತ ಎರಡು ಜಾಥಾ ಏಕಕಾಲದಲ್ಲಿ ಕೋಲಾರದ ಕೆ.ಜಿ.ಎಫ್ ಮತ್ತು ಬೀದರ್‍ನಿಂದÀ ಹೊರಟು ಧಾರವಾಡದಲ್ಲಿ 16.11.1979 ರಂದು ಸಮಾಗಮಗೊಂಡಿದ್ದು ಅವಿಸ್ಮರಣೀಯ, ಐತಿಹಾಸಿಕ ಸಂದರ್ಭ ಎಂದು ಸಮುದಾಯದ ಹಿರಿಯ ಸಂಗಾತಿಗಳು ಈಗಲೂ ನೆನೆಸಿಕೊಳ್ಳುತ್ತಾರೆ. 1986 ರಿಂದ 2009 ರವರೆಗೂ ಜನಪರ ನಿಲುವುಗಳಿಗಾಗಿ ರಾಜ್ಯದಾದ್ಯಂತ ಜಾಥಾ, ವ್ಯಂಗಚಿತ್ರ ಪ್ರದರ್ಶನ, ಬೀದಿ ನಾಟಕಗಳನ್ನು ಸಮುದಾಯ ನಡೆಸಿದೆ. 1986ರಲ್ಲಿ ಅಣುಸಮರದ ವಿರುದ್ಧ ಸಮುದಾಯದ ಸಂವೇದನಾಶೀಲ ಕಲಾವಿದರು 120 ಅಡಿಯ ತೈಲಚಿತ್ರ-ಮನುಷ್ಯ ಕುಲದ ಹುಟ್ಟಿನಿಂದ ಬೆಳವಣಿಗೆಯ ಇತಿಹಾಸವನ್ನೇ ಚಿತ್ರಿಸಿ ಅಣುಸಮರದ ವಿನಾಶಕಾರೀ ಪ್ರವೃತ್ತಿಯನ್ನು ಕುಂಚದಲ್ಲಿ ಮೂಡಿಸಿ, ದೇಶದಾದ್ಯಂತ ಅದನ್ನು ಪ್ರದರ್ಶಿಸಿದ ಸಂಗತಿಯೊಂದು ಚರಿತ್ರಾರ್ಹವಾದದ್ದು. ರೈತ ಕಾರ್ಮಿಕರೆಡೆಗೆ ಸಮುದಾಯ ಜಾಥಾ, ಬರಗಾಲದ ಭೀಕರೆತೆಗ ಕಾರಣಗಳನ್ನು ತಿಳಿಸುವ ಜಾಥಾ, ಭ್ರಷ್ಟಾಚಾರ ಬೆಲೆ ಏರಿಕೆಗಳ ವಿರುದ್ಧ ಜಾಥಾ, ಹಸಿವು ಮುಕ್ತ ಕರ್ನಾಟಕಕ್ಕಾಗಿ ಜಾಥಾ, ಹೀಗೆ ಪ್ರತಿ ಸಂದರ್ಭದಲ್ಲಿಯೂ ತನ್ನ ಸಾಮಾಜಿಕ ಸಾಂಸ್ಕøತಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಬಂದಿರುವ ಸಮುದಾಯಕ್ಕೀಗ 40 ರ ಸಂಭ್ರಮ.
ಈ ನಾಲ್ಕು ದಶಕಗÀಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸಮುದಾಯದ ಘಟಕಗಳು ಪ್ರಾದೇಶಿಕ ಇತಿಮಿತಿಗಳ ಮಧ್ಯೆಯೇ ಹಲವು ನಾಟಕ, ವಿಚಾರ ಸಂಕಿರಣಗಳು, ಸಮಗ್ರತಾ, ಸೌಹಾರ್ದ ಉತ್ಸವಗಳನ್ನೂ ನಡೆಸುತ್ತ ಬಂದಿವೆ.

ಮಾರೀಚನ ಬಂಧುಗಳು, ತಾಯಿ, ಗೆಲಿಲಿಯೋ, ಮ್ಯಾಕ್ಬೆತ್, ಸ್ಪಾರ್ಟಕಸ್, ಕತ್ತಲೆ ದಾರಿ ದೂರ, ಮಹಾಚೈತ್ರ, ಸಂಸ್ಕಾರ, ಪಂಚಮ, ಕುರಿ, ರಾವೀ ನದಿಯ ದಂಡೆಯಮೇಲೆ, ಟ್ರೈನ್ ಟು ಪಾಕಿಸ್ತಾನ್, ಜಲಗಾರ, ದಫನ್, ಉಚಲ್ಯಾ, ಮತ್ತೆ ಬರುವನು ಚಂದಿರ, ಕುಲಂ, ಬುದ್ಧ ಪ್ರಬುದ್ಧ, ತಣ್ಣಿರ್ ತಣ್ಣೀರ್(ತಮಿಳು) ಮಹಾಭೂಮಿ(ತೆಲುಗು) ಜುಗಾರಿ ಕ್ರಾಸ್, ಪಂಪ ಭಾರತ, ತುಘಲಕ್, ಇನ್ನೂ ಅನೇಕ ನಾಟಕಗಳು ಸಮುದಾಯದ ವಿವಿಧ ಘಟಕಗಳ ರಂಗ ಚಟುವಟಿಕೆಗಳಾಗಿ ಮೂಡಿ ಬಂದಿವೆ.
ಸಮುದಾಯ 40
ಸಮುದಾಯ 40ರ ನೆನಪಿಗಾಗಿ ‘ಸ್ವರ ಸಾಮರಸ್ಯ’ ರಾಷ್ಟ್ರೀಯ ಸಂಗೀತೋತ್ಸವ, ವಿದ್ಯಾರ್ಥಿಗಳಿಗೆ ವಾಚನಾಭಿರುಚಿ ಕಮ್ಮಟ, ಬುಡಕಟ್ಟು ಮಹಾಕಾವ್ಯಗಳ ಆಖ್ಯಾನ ಮತ್ತು ವ್ಯಾಖ್ಯಾನ ಕಾರ್ಯಕ್ರಮಗಳನ್ನು ಅನುಕ್ರಮವಾಗಿ ಬೆಂಗಳೂರು, ಕುಂದಾಪುರ ಮತ್ತು ಶಿವಮೊಗ್ಗದಲ್ಲಿ ನಡೆಸಲಾಗಿದೆ ಮತ್ತು 2016ರ ಫೆಬ್ರವರಿಯಲ್ಲಿ ನಾಟಕೋತ್ಸವವನ್ನು ಗುಲ್ಬರ್ಗಾದಲ್ಲಿ ಆಯೋಜಿಸಲಾಗಿದೆ. ಈಗ 40 ರ ಹರಯದಲ್ಲಿ ಸಮುದಾಯ ಕರ್ನಾಟಕ ರೆಪರ್ಟರಿ ಪ್ರಾರಂಭವಾಗಲಿದೆ. ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಸಾಮರಸ್ಯದ ಎಳೆಗಳು ತುಂಡಾಗುತ್ತಿವೆ. ಅಸಹನೆ, ಅಸೂಯೆ, ಅತೃಪ್ತಿಗಳು ನೆಲೆಯೂರುತ್ತಿವೆ. ನೆಲದ ಸಾಮರಸ್ಯದ ಪರಂಪರೆಯನ್ನು ಎತ್ತಿ ಹಿಡಿಯುವ ಚಿಂತನೆ ಎಲ್ಲ ಕಡೆಗಳಿಂದಲೂ ಮೂಡಿ ಬರಬೇಕು. ಈ ನಿಟ್ಟಿನಲ್ಲೊಂದು ಇದೊಂದು ಚಿಕ್ಕ ಪ್ರಯತ್ನವಷ್ಟೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s