ಕೆ.ಜಿ.ಎಫ್ ನಲ್ಲಿ ಸಮುದಾಯ ಕರ್ನಾಟಕ ರೆಪರ್ಟರಿಯ ಬಿಡುಗಡೆಯ ರಂಗಸಂಚಾರ

ಮೃತ್ಯುಂಜಯ
ನಿರ್ದೇಶನ: ಡಾ. ಶ್ರೀಪಾದ ಭಟ್

ಪ್ರಗತಿಶೀಲತೆಯನ್ನು ಬದುಕಿನ, ಬರಹದ ಧ್ಯೇಯವಾಗಿಸಿಕೊಂಡು, ನಿರಂತರವಾಗಿ ರೈತರ, ಕಾರ್ಮಿಕರ, ಮಹಿಳೆಯರ ಕುರಿತು ಬರೆಯುತ್ತ ಹೋದವರು ನಿರಂಜನರು. ಅವರ ಎರಡು ಮಹತ್ವದ ಕಾದಂಬರಿಗಳಾದ ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ ಕಾದಂಬರಿಗಳ ರಂಗ ಪ್ರಸ್ತುತಿ ಈ ನಾಟಕ. ರೈತಬವಣೆಯ ಸಂಕಟಗಳನ್ನೂ ಆ ಬದುಕಿನ ಘನತೆಯನ್ನೂ ಒಟ್ಟಾಗಿಯೇ ಪರಿಭಾವಿಸುವ ನಿರಂಜನರ ಈ ಕಥನ, ವರ್ತಮಾನದ ಹಲವು ತಲ್ಲಣಗಳಿಗೆ ಒಂದು ಕಾಣ್ಕೆಯನ್ನು ಒದಗಿಸಬಲ್ಲದು.
ಪ್ರಾಚೀನ ಈಜಿಪ್ಟಿನಲ್ಲಿ ನಿರಂಕುಶ ಸತ್ತೆ ಹಾಗೂ ಸಂಪತ್ತಿಗಾಗಿ ಅರಮನೆ-ಗುರುಮನೆಗಳನಡುವೆ ನಡೆಯುವ ಚೌಕಮಣೆ ಆಟದಲ್ಲಿ ಬಲಿಯಾಗುತ್ತಿರುವ ಜನಸಾಮಾನ್ಯರ ಬದುಕನ್ನು ಪುನರ್ ಸಂಘಟಿಸುತ್ತ, ಸಮಾನತೆಯ ಸಮಾಜವೊಂದರ ಸ್ಥಾಪನೆಗೆ ಪ್ರಯತ್ನಿಸಿ ಬಲಿಯಾದವನು ಮೃತ್ಯುಂಜಯ ಕಾದಂಬರಿಯ ಮನೆಪ್ಟಾ. ಆತ ಅಳಿಯುತ್ತಾನಾದರೂ, ಆತ ಸಂಘಟಿಸಿದ ಹೋರಾಟ ಸೂರ್ಯದೇವನ ಮಗ ‘ಒಸೈರಿಸ್’ ನಂತೆ ‘ಮೃತ್ಯುಂಜಯ’.

ಚಿರಸ್ಮರಣೆ ಕಾದಂಬರಿಯು ಇಪ್ಪತ್ತನೇ ಶತಮಾನದ ಆದಿಯಲ್ಲಿ ಕೇರಳದ ಕೈಯೂರಿನಲ್ಲಿ ನಡೆದ ರೈತ ಚಳುವಳಿಗೆ ಸಂಬಂಧಿಸಿದ್ದು. ಸಮಾನತೆಯ ಕನಸು ಹೊತ್ತ ರೈತ ಸಂಘಟನೆಯೊಂದು ಬ್ರಿಟೀಷರು ಹಾಗೂ ಜಮೀನ್ದಾರರ ಚೌಕಮಣೆ ಆಟದಲ್ಲಿ ಬಲಿಯಾಗುತ್ತದಾದರೂ, ಅದು ಸಂಘಟಿಸಿದ ಹೋರಾಟ ಹೇಗೆ ‘ ಚಿರಸ್ಮರಣೆ’ಯಾಗಿ ಉಳಿಯಿತು ಎಂಬುದನ್ನು ಕಾಣಿಸುತ್ತದೆ.
ಹೀಗೆ ವರ್ಗ ಸಂಘರ್ಷ ಹಾಗೂ ತತ್ಪರಿಣಾಮವಾಗಿ ರೂಪುಗೊಳ್ಳುವ ಸಮಾನತೆಯ ಸಮಾಜವೊಂದರ ಕನಸುಕಂಡ ನಿರಂಜನರು ನಂಬಿದ್ದರು “ ಕತ್ತಲಾದ ಮೇಲೆ ಬೆಳಕು ಹರೀತದೆ. ಇದು ಸಾಮಾನ್ಯ ಅಂತ ತೋರುವ ಅಸಾಮಾನ್ಯ ವಿಷಯ” ಅಂತ.
ಹೀಗೆ ಅಕ್ಷರದ ಬೆಳಕಿನಲ್ಲಿ ಮನುಷ್ಯನ ಅದಮ್ಯವಾದ ಸ್ವಾತಂತ್ರ್ಯದ ಹಂಬಲವನ್ನು ಘನವಾದ ಹೋರಾಟವಾಗಿಸಿ ಅರಮನೆ ಗುರುಮನೆಗಳ, ಅಧಿಕಾರ ಸಂಪತ್ತುಗಳ ಅಪವಿತ್ರ ಮೈತ್ರಿಗೆ ಸವಾಲೆಸೆಯುವ ಕತೆಗಳನ್ನು ಸೃಜಿಸಿ ಕೊಟ್ಟ ನಿರಂಜನರ, ವಿಭಿನ್ನ ಕಾಲ ದೇಶಗಳ ಬರಹವನ್ನು ಒಂದುಗೂಡಿಸಿ ನಾವಿಲ್ಲಿ ಪುನರಭಿನಯಿಸುತ್ತಿದ್ದೇವೆ. ಇದು ಹೊಸಕಾಲದ ಹೊಸ ಹೊರತೋರ್ಕೆಯೂ ಹೌದು; ಮತ್ತು ಈ ಮೂಲಕ ನಿರಂಜನರ ಚೇತನಕ್ಕೆ ನಾವು ಸಲ್ಲಿಸುವ ರಂಗ ನಮನವೂ ಹೌದು.
ರಂಗಪಠ್ಯ : ಡಾ.ಎಂ.ಜಿ.ಹೆಗಡೆ. ವಿನ್ಯಾಸ : ಎಂ.ಎಸ್. ಸತ್ಯು. ನಿರ್ದೇಶನ : ಡಾ.ಶ್ರೀಪಾದ ಭಟ್ . ಸಹನಿರ್ದೇಶನ :ಯತೀಶ್ ಕೊಳ್ಳೇಗಾಲ ಮತ್ತು ಲಕ್ಷ್ಮಣ ಪಿ.
ಕೃತಜ್ಞತೆ : ಬಿ.ಸುರೇಶ, ವೆಂಕಟೇಶ ಪ್ರಸಾದ್.
ಕಾವ್ಯರಂಗ
ಕನ್ನಡ ಕಾವ್ಯಪ್ರಯೋಗ
ನುಡಿಯೊಳಗೆ ಸಲುವುದು ನಾಡಿನಾ ರೂಪಕ. ನಾಡಿನ ಆದರ್ಶ, ಕಾಣ್ಕೆ, ಸಾಂಸ್ಕøತಿಕ ಚರಿತ್ರೆ ನುಡಿಯೊಳಗೆ ಒಡಮೂಡಿದೆ. ಶಾಸನಪದ್ಯಗಳಿಂದ ಹಿಡಿದು ಇದುವರೆಗಿನ ಕಾವ್ಯ ಕಥನಗಳ ಆಯ್ದ ಬರಹಗಳ ತುಣುಕನ್ನು ಸಂಬಂಧಗಳ ಪರಿಕಲ್ಪನೆಯಾಧಾರದಲ್ಲಿ ಹೆಣೆದು ಇಲ್ಲಿ ರಂಗರೂಪಕವಾಗಿಸಲಾಗಿದೆ. ಕನ್ನಡದ ಲೋಕಗೃಹಿಕೆ, ಕನ್ನಡದ ವಿವೇಕ ಇವನ್ನು ಇಂದಿನ ಯುವಕರಿಗಾಗಿ ಮರುನಿರೂಪಿಸುವ ಒಂದು ಪ್ರಯತ್ನ ಇದು. ಸಮುದಾಯದ ನಟ ನಟಿಯರು ಈ ಕಾವ್ಯಗಳನ್ನು ಆಡುತ್ತಾರೆ, ಹಾಡುತ್ತಾರೆ, ಕೆಲವನ್ನು ಅಭಿನಯಿಸುತ್ತಾರೆ. ಒಂದೂವರೆ ಗಂಟೆ ಕಾಲ ಸುಮಾರು 31 ಸಾಹಿತ್ಯಿಕ ಬರಹವನ್ನು ಇಲ್ಲಿ ರಂಗಕ್ಕೆ ತರಲಾಗಿದೆ. ಸಾಹಿತ್ಯ ಕಥನಗಳ ರಂಗ ಓದು ಇದು. ವಿದ್ಯಾರ್ಥಿಗಳಿಗೂ, ಅದ್ಯಾಪಕರಿಗೂ ಅನುಕೂಲವಾಗುವುದೆಂಬ ಶೈಕ್ಷಣಿಕ ಉದ್ದೇಶವೂ, ಯುವಕರ ದನಿ ಇಂದು ಕರ್ಕಶವಾಗುತ್ತಿರುವ ಹೊತ್ತಿನಲ್ಲಿ ಅವರ ದೇಹಕ್ಕೆ ಕಾವ್ಯದ ಸಾಹಚರ್ಯ ಒದಗಿಸುವ ಸಾಮಾಜಿಕ ಉದ್ದೇಶವೂ ಸಮುದಾಯದ ಈ ರಂಗ ಪ್ರಸ್ತುತಿಯ ಹಿಂದಿದೆ.
ರಂಗ ಪಠ್ಯ: ಡಾ.ಎಂ.ಜಿ.ಹೆಗಡೆ; ವಿನ್ಯಾಸ:ದಾಮೋದರ ನಾಯ್ಕ, ಹೊನ್ನಾವರ; ನಿರ್ದೇಶನ: ಡಾ.ಶ್ರೀಪಾದ ಭಟ್; ಸಹನಿರ್ದೆಶನ: ಯತೀಶ್ ಕೊಳ್ಳೇಗಾಲ ಮತ್ತು ಲಕ್ಷ್ಮಣ ಪಿ;

ಗೋಡೆಗೆ ಕತೆ ಹೇಳಿ.
(ಬೀದಿ ನಾಟಕ)
ಬೆರೆತುಬಾಳಬೇಕಾಗಿದ್ದ ಮನುಷ್ಯರು ಇಂದು ಭಾವಗಳಿಗೂ ಬೇಲಿ ಹಾಕಿಕೊಂಡಿದ್ದು, ಪರಸ್ಪರ ಸಂವಹನವನ್ನೇ ಮರೆತಿದ್ದಾರೆ. ಜಗದ ತುಂಬ ಗೋಡೆಗಳೆದ್ದಿವೆ ; ಮನಸ್ಸುಗಳ ನಡುವೆ ಬೇಲಿಗಳೆದ್ದಿವೆ. ಇಂದು ಬೇಲಿಯಾಚೆ ನಿಂತಾದರೂ ಇನ್ನೊಬ್ಬರ ಕತೆ ಕೇಳಿಸಿಕೊಳ್ಳಬೇಕಿದೆ. ಸಮುದಾಯದ ನೋವನ್ನು ಕತೆಯಾಗಿಸುವ ಮತ್ತು ಎಂತಹ ಸ್ಥಿತಿಯಲ್ಲೂ ಸೃಷ್ಠಿಸುವ ಗುಣವನ್ನು ಬಿಟ್ಟುಕೊಡದ ರಂಗಭೂಮಿಯ ಜಿಗುಟುತನವನ್ನು ಬಳಸಿಕೊಂಡೇ, ಜಗತ್ತನ್ನು ಹಿಂಸ್ರಕವಾಗಿಸಿದ ಅನಿಷ್ಠಗಳಿಂದ ಬಿಡಿಸಿಕೊಳ್ಳಬೇಕಿದೆ. ‘ಬಿಡುಗಡೆಯ ರಂಗಭೂಮಿ” ಜಗತ್ತಿನೆಲ್ಲೆಡೆ ಸಕ್ರಿಯ ಗೊಳ್ಳಬೇಕಿದೆ. ಅದಕ್ಕಾಗಿ ನಾವು ಕತೆಹೇಳುತ್ತೇವೆ.

ರಚನೆ : ಸುಧಾ ಆಡುಕಳ. ನಿರ್ದೇಶನ : ಡಾ.ಶ್ರೀಪಾದ ಭಟ್ . ಸಹನಿರ್ದೇಶನ :ಯತೀಶ್ ಕೊಳ್ಳೇಗಾಲ ಮತ್ತು ಲಕ್ಷ್ಮಣ ಪಿ.

ಸಮುದಾಯ ರೆಪರ್ಟರಿ

2013 ರ ವರ್ಷದ ಜಾಗತಿಕ ರಂಗ ದಿನಾಚರಣೆಯ ಸಂದೇಶ ನೀಡಿದ ದಾರಿಯೋ ಪೋ ನುಡಿದ ಮಾತು-

“ನಮ್ಮ ಕತೆಯನ್ನು ನಾವು ಹೇಳಬೇಕು. ಯುವಕರನ್ನು ಬಳಸಿಕೊಂಡು ಯುವಕರಿಗೆ ಹೇಳುತ್ತ ಹೋಗಬೇಕು. ಅವರಿಗೆ ನಾಟಕದ ಕಲೆ ಕಲಿಸುವದು ಅಂದರೆ ಅಂಗಾಂಗಗಳನ್ನು ಹೇಗೆ ಬಳಸೋದು, ಎಲ್ಲಿ ಉಸಿರು ಬಿಗಿ ಹಿಡಿಯೋದು, ಎಲ್ಲಿ ದನಿಯನ್ನು ಏರಿಳಿಸಬೇಕು ಎನ್ನುವದನ್ನು ಕಲಿಸುವದಷ್ಟೇ ಅಲ್ಲ. ನಮ್ಮ ಸುತ್ತ ಮುತ್ತ ಏನಾಗುತ್ತಿದೆ ಅನ್ನುವದನ್ನು ಹೇಳಿಕೊಡಬೇಕು. ಹಾಗೆ ಮಾಡಿದಾಗ ಅವರು ತಮ್ಮ ಕತೆಯನ್ನು ಹೇಳಬಲ್ಲ ಸಮರ್ಥರಾಗುತ್ತಾರೆ. ತನ್ನ ಕಾಲದ ಕುರಿತು ಹೇಳದ ಕತೆಯಾಗಲೀ, ನಾಟಕವಾಗಲೀ, ಕಲೆಯಾಗಲೀ ಸಮಕಾಲೀನ ಅಲ್ಲ.” ‘ಸಮುದಾಯ’ ಸದಾ ಸಮಕಾಲೀನ ಕಲೆಯಲ್ಲಿಯೇ ಬದುಕು ಕಂಡಿದೆ. ನಾವೀಗ ನಮ್ಮ ಕತೆ ಹೇಳಬೇಕಿದೆ. ಅದಕ್ಕೆ ನಮ್ಮ ಯುವಕರನ್ನು ಸಿದ್ಧಗೊಳಿಸಬೇಕಿದೆ. ನಾಡಿನ ತುಂಬ ಈ ಕಥನವನ್ನು ತಲುಪಿಸುವ ಜವಾಬ್ದಾರಿ ನಿರ್ವಹಿಸುವ ಸಲುವಾಗಿ ‘ಸಮುದಾಯ’ ರೆಪರ್ಟರಿ ಕಟ್ಟುತ್ತಿದೆ. ರಂಗಭೂಮಿಯನ್ನು ತನ್ನ ಸಾಂಸ್ಕøತಿಕ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವನ್ನಾಗಿಸಲು ಹೊರಟಿದೆ..
ರಂಗಭೂಮಿಗೆ ಇದುವರೆಗಿನ ಶೋಕಿತನಕ್ಕಿಂತ ಬೇರೆಯದೇ ಆದ ಹೊಣೆಗಾರಿಕೆಯೂ ಇದೆ. ಈ ಹೊಣೆಗಾರಿಕೆಯನ್ನು ರಂಗ ಮುಖೇನ ನಿರ್ವಹಿಸಬೇಕಾದ ಜವಾಬ್ದಾರಿಯೂ ಸಮುದಾಯದ ಮೇಲಿದೆ. ಮುಖ್ಯವಾಗಿ ರಂಗಭೂಮಿ ರೈತರನ್ನೂ, ಶಾಲೆಯನ್ನೂ, ಕಾಲೇಜುಗಳನ್ನೂ, ಕಾರ್ಮಿಕರನ್ನೂ – ಹೀಗೆ ಸಾಮುದಾಯಿಕ ಬದುಕಿನ ಚಾಲನಾ ಶಕ್ತಿಯ ಎಲ್ಲ ಘಟಕಗಳನ್ನೂ ತಲುಪಲೇಬೇಕಿದೆ. ಈ ಕುರಿತು ಸಮುದಾಯ ಯೋಜನೆಯನ್ನು ಹಮ್ಮಿಕೊಳ್ಳಬೇಕಿದೆ. ಅದರ ಪ್ರಮುಖ ಅಂUವಾಗಿ ‘ರೆಪರ್ಟರಿ’ಯನ್ನು ಆರಂಭಿಸುತ್ತಿದೆ.

ರೆಪರ್ಟರಿಯಲ್ಲಿ…
ಕನ್ನಡ ಸಾಹಿತ್ಯ ಲೋಕದ ಪ್ರಗತಿಶೀಲ ಜನಪರ ಕಾದಂಬರಿಕಾರ ನಿರಂಜನರ ‘ಮೃತ್ಯುಂಜಯ’ ಮತ್ತು ‘ಚಿರಸ್ಮರಣೆ’ ಕಾದಂಬರಿಗಳನ್ನು ಒಂದುಗೂಡಿಸಿ ರಚಿಸಲಾದ ‘ಮೃತ್ಯುಂಜಯ’ ರಂಗರೂಪವು ರೆಪರ್ಟರಿಯ ಬಹುಮುಖ್ಯ ಆಕರ್ಷಣೆ. ಡಾ.ಎಂ.ಜಿ.ಹೆಗಡೆಯವರು ಸಿದ್ಧಪಡಿಸಿರುವ ಈ ರಂಗರೂಪವನ್ನು ರಂಗಭೂಮಿಯಲ್ಲಿ ಈಗಾಗಲೇ ರಂಗ ನಿರ್ದೇಶಕನಾಗಿ ತನ್ನ ಛಾಪು ಮೂಡಿಸಿರುವ ಡಾ.ಶ್ರೀಪಾದ ಭಟ್ ನಿರ್ದೇಶಿಸಿದ್ದಾರೆ. ರಂಗ ವಿನ್ಯಾಸವನ್ನು ರಂಗಭೂಮಿಯ ಹಿರಿಯ ಚೇತನ ಎಂ.ಎಸ್.ಸತ್ಯು ಅವರು ಸಿದ್ಧಪಡಿಸಿದ್ದಾರೆ.
ಇದರ ಜತೆಯಲ್ಲೇ ಪ್ಯಾಲೆಸ್ತೈನ್ ಕುರಿತ ಒಂದು ಬೀದಿ ನಾಟಕವೂ ಕಾರ್ಯಾಗಾರದಲ್ಲಿ ಸಿದ್ಧವಾಗಿದೆ. ಪಂಪನಿಂದ ಹಿಡಿದು ಇತ್ತೀಚಿನವರೆಗಿನ ಕನ್ನಡ ಸಾಹಿತ್ಯ ಇತಿಹಾಸವನ್ನು ಹೇಳುವ ‘ಕಾವ್ಯರಂಗ’ ಎಂಬ ನವೀನ ಕಲಾ ಪ್ರಕಾರ ಕೂಡ ರೆಪರ್ಟರಿಯ ಭಾಗವಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s