ನಾಟಕ ಇಲ್ಲಿಗೆ ಮುಗಿಯ ಬೇಕಾಗಿತ್ತು, ಅದರೆ ಅದು ಹಾಗಾಗಲಿಲ್ಲ..

avadhimag.com

ನಾಟಕ ಇಲ್ಲಿಗೆ ಮುಗಿಯ ಬೇಕಾಗಿತ್ತು, ಅದರೆ ಅದು ಹಾಗಾಗಲಿಲ್ಲ..

ಎನ್ ಸಂಧ್ಯಾರಾಣಿ

ನಾಟಕ ಎಂದರೆ ಕೇವಲ ಕಥೆಯಲ್ಲ. ಅದು ಕಥೆಯನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯಬೇಕು. ಅದಕ್ಕೆ ನಾಟಕದ ಗತಿ, ಚಲನೆ, ನಟನೆ, ದೃಶ್ಯದಿಂದ ದೃಶ್ಯಕ್ಕೆ ಸರಾಗವಾದ ಸಂಚಾರ, ಬೆಳಕು, ಸಂಗೀತ, ರಂಗಸಜ್ಜಿಕೆ, ಅಭಿನಯ, ಪಾತ್ರಧಾರಿಗಳ ಕೋ ಆರ್ಡಿನೇಶನ್, ಅವರ ಮಾತು, ಉಸಿರು ಬಿಗಿಹಿಡಿಯುವ ಮೌನ ಮತ್ತು ನಿನ್ನೆಗಳ ಕಥೆಯನ್ನು ಇಂದಿಗೆ ಮುಖಾಮುಖಿಯಾಗಿ ನಿಲ್ಲಿಸಬಲ್ಲ ನಿರ್ದೇಶಕನ ಒಂದು ಕಣ್ಣೋಟ ಎಲ್ಲಾ ಬೇಕಾಗುತ್ತದೆ. ಇವೆಲ್ಲವೂ ಇದ್ದಾಗ ಅದು ’ಮೃತ್ಯುಂಜಯ’ದಂತಹ ಒಂದು ನಾಟಕವಾಗುತ್ತದೆ.

ನಿರಂಜನರು ನನಗೆ ಮೊದಲು ಪರಿಚಯವಾಗಿದ್ದು ಕಾಲೇಜಿನಲ್ಲಿ.  ಕನ್ನಡ ಮೇಷ್ಟರು ’ಮೃತ್ಯುಂಜಯ’ ಓದಿಸಿದ್ದರು, ’ಚಿರಸ್ಮರಣೆ’ ಓದಿಸಿದ್ದರು. ಅದೊಂದು ಸಂಧಿಕಾಲ. ’ಮೃತ್ಯುಂಜಯ’ ಇತಿಹಾಸದ ಕಥೆಯನ್ನು ಹೇಳಿತ್ತು, ’ಚಿರಸ್ಮರಣೆ’ ನಿನ್ನಿನ ಕಥೆಯನ್ನು ಹೇಳಿತ್ತು, ಅದೇ ಕಾಲಕ್ಕೆ ರೈತಚಳುವಳಿ ಆ ಎಲ್ಲಾ ನಿನ್ನೆಗಳನ್ನೂ ಇಂದಿಗೆ ಪ್ರಸ್ತುತಗೊಳಿಸಿತ್ತು. ಇತಿಹಾಸ ಪುನರಾವರ್ತನಗೊಳ್ಳುತ್ತದೆ ಎನ್ನುತ್ತಾರೆ, ಅದಷ್ಟೇ ಅಲ್ಲ, ಮೇರುಕೃತಿಗಳೂ ಸಹ ಹಾಗೆ ಕಾಲದಿಂದ ಕಾಲಕ್ಕೆ ತಮ್ಮಲ್ಲಿನ ಹೊಸಮಗ್ಗುಲನ್ನು ಬದಲಾದ ಕಾಲದ ಬೆಳಕಿನಲ್ಲಿ ತೋರುತ್ತಾ ನಮ್ಮ ’ಇಂದು’ಗಳಿಗೆ ಬೆಳಕು ನೀಡುತ್ತಿರುತ್ತವೆ.

mrutyunjaya3

ಸಮುದಾಯರೆಪರ್ಟರಿಗಾಗಿ ಶ್ರೀಪಾದಭಟ್ಟರು ನಿರ್ದೇಶಿಸಿದ ನಾಟಕ ’ಮೃತ್ಯುಂಜಯ’. ಈ ಪ್ರಯೋಗದಲ್ಲಿ ’ಚಿರಸ್ಮರಣೆ’ ಮತ್ತು ’ಮೃತ್ಯುಂಜಯ’ ಎರಡನ್ನೂ ರಂಗಕ್ಕೆ ಅಳವಡಿಸಿಕೊಂಡಿದ್ದಾರೆ ಎಂದಾಗ ನನಗೆ ಸಹಜವಾಗಿಯೇ ಕುತೂಹಲವಾಗಿತ್ತು. ಎರಡನ್ನೂ ಅವರು ಹೇಗೆ ಸಂಯೋಜಿಸಬಹುದು ಎನ್ನುವುದು ನನಗೆ ಪ್ರಶ್ನೆಯಾಗಿತ್ತು. ಶ್ರೀಪಾದಭಟ್ಟರು ರಂಗದ ಮೇಲೆ ಒಂದು ಕಾವ್ಯ ಕಟ್ಟಿಕೊಡುತ್ತಾರೆ. ಅವರ ನಾಟಕಗಳಲ್ಲಿ ಕಥೆಯಲ್ಲಿನ ಪಾತ್ರಧಾರಿಗಳಷ್ಟೇ ಅಲ್ಲ, ಬೆಳಕು ಮತ್ತು ರಂಗಸಜ್ಜಿಕೆ ಸಹ ಪಾತ್ರಧಾರಿಗಳಾಗಿ ಕಾರ್ಯ ನಿರ್ವಹಿಸುತ್ತವೆ. ಜೊತೆಗೆ ಈ ಕುತೂಹಲವೂ ಸೇರಿಕೊಂಡಿತು. ನಿರೀಕ್ಷೆಗಳನ್ನಿಟ್ಟುಕೊಂಡೇ ನೋಡಿದ ನಾಟಕ ಅದು. ನನ್ನ ನಿರೀಕ್ಷೆಗಳು ಯಾವುವೂ ಹುಸಿಯಾಗಲಿಲ್ಲ.

ನಾಟಕ ಶುರುವಾಗುವುದು ’ಚಿರಸ್ಮರಣೆ’ಯ ಕಥೆಯ ಮೂಲಕ. ಪಂಡಿತರು ಹಳ್ಳಿಗೆ ಬಂದು ರೈತರನ್ನು ಸಂಘಟಿಸಲು ಒಂದು ರಹಸ್ಯ ಸಭೆ ನಡೆಸುವ ಮೂಲಕ. ಅಲ್ಲಿ ಭಾಷಣ ಮಾಡುವ ಬದಲು ಪಂಡಿತರು ನಿಮ್ಮ ಕಥೆಯನ್ನೇ ಹೋಲುವ ಇನ್ನೊಂದು ಕಥೆ ಹೇಳುತ್ತೇನೆ ಎನ್ನುತ್ತಲೇ ಪಾತ್ರಧಾರಿಗಳಾಗಿದ್ದವರು ಸೂತ್ರಧಾರಿಯಾಗಿ ಬದಲಾಗುತ್ತಾರೆ. ರಂಗದ ಮೇಲೆ ಐಗುಪ್ತದ(ಈಜಿಪ್ಟಿನ) ಕಥೆ ಶುರುವಾಗುತ್ತದೆ. ವೇಷ ಭೂಷಣಗಳನ್ನು ಹೊರತುಪಡಿಸಿದರೆ ಅವರಾಡುವ ಮಾತು ಇಂದಿನ ಮಾತು ಆಗುತ್ತದೆ, ಆ ಮಾತುಗಳನ್ನು ಆಡುವವರು ನಮ್ಮ ನಡುವಿನವರೇ ಆಗಿಬಿಡುತ್ತಾರೆ. ತೆರಿಗೆ ಹಣ ವಸೂಲಿಗೆ ಬಂದವರ ಬಳಿ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು ಎಂದು ರೈತರು ನಿರ್ಧರಿಸುತ್ತಾರೆ. ತಮ್ಮ ಪ್ರತಿನಿಧಿಯಾಗಿ ಮನೋಪ್ಟಾನನ್ನು ಆಯ್ದುಕೊಳ್ಳುತ್ತಾರೆ. ಮನೋಪ್ಟ ಒಬ್ಬ ಸಮರ್ಥ ನಾಯಕ. ಆವೇಶಕ್ಕೆ ಬೀಳದೆ ತನ್ನವರ ನೋವುಗಳನ್ನು ಅಧಿಕಾರಿಗಳ ಮುಂದೆ ಹೇಳಿಕೊಳ್ಲುವ ಸಾಮರ್ಥ್ಯ ಉಳ್ಳವ. ಅವನು ಬಂದು ಕೂರುತ್ತಾನೆ. ತೆರಿಗೆ ಅಧಿಕಾರಿ ತೆರಿಗೆ ಏಕೆ ಹೆಚ್ಚು ಮಾಡಬೇಕು ಎಂದು ಹೇಳುತ್ತಾ ಹೋಗುತ್ತಾನೆ. ತೆರಿಗೆ ನಿಗದಿ ಪಡಿಸಲು, ವಸೂಲಿ ಮಾಡಲು, ಅದರ ಮೇಲ್ವಿಚಾರಣೆ ಮಾಡಲು, ಅದರ ಲೆಕ್ಕ ಇಡಲು, ಅದರ ವಿಲೇವಾರಿ ಮಾಡಲು ಹೇಗೆ ಒಂದು ದಂಡಿನ ಅಗತ್ಯವಿದೆ ಮತ್ತು ಅದೆಲ್ಲವನ್ನೂ ನಿಭಾಯಿಸಲು ರೈತರು ತೆರಿಗೆ ಹಣಕೊಡಬೇಕು ಎಂದು ಹೇಳುತ್ತಾ ಹೋಗುತ್ತಾನೆ. ವ್ಯವಸ್ಥೆಯ ಅನ್ಯಾಯ, ಕ್ರೌರ್ಯ ಇರುವುದು ಇಲ್ಲಿ. ಅವರನ್ನು ನಿಯಂತ್ರಿಸಲು ಅವರಿಂದಲೇ ಕಂದಾಯ ವಸೂಲಿ ಮಾಡುವ ಅನ್ಯಾಯದಲ್ಲಿ. ತೆರಿಗೆ ಹೆಚ್ಚುವರಿಗೆ ಭೂಮಾಲಿಕರದೇನೂ ವಿರೋಧ ಇಲ್ಲ. ಏಕೆಂದರೆ ತಾವು ಹೇಗೂ ಪೂರ್ತಿ ತೆರಿಗೆ ಕಟ್ಟುವುದಿಲ್ಲ ಎನ್ನುವುದರ ಬಗ್ಗೆ ಅವರಿಗೆ ವಿಶ್ವಾಸ ಇದೆ. ಅದೆಲ್ಲಾ ನೋಡುವಾಗ ಹತ್ತಿಪ್ಪತ್ತು ಸಾವಿರದ ಸಾಲ ತೀರಿಸಲು ನೂರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ದಿನಮಾನದಲ್ಲಿ ಐಶಾರಾಮಿ ಜೀವನ ನಡೆಸುವ ಕೋಟ್ಯಾಧಿಪತಿಯೊಬ್ಬ ಹಕ್ಕಿನಿಂದೆಂಬಂತೆ ತನ್ನ ಕೋಟ್ಯಾಂತರ ರೂಗಳ ಸಾಲ ಮನ್ನಾ ಮಾಡಿಸಿಕೊಳ್ಳುವ ಉದಾಹರಣೆ ಎಲ್ಲೂ ವಾಚ್ಯವಾಗದೆಯೂ ನಮಗೆ ನೆನಪಾಗಿಬಿಡುತ್ತದೆ.

ರೈತ ನಾಯಕನ ಸೆರೆ ಆಗುತ್ತದೆ, ರೈತರು ಬಂಡಾಯವೇಳುತ್ತಾರೆ, ರಾಜಪ್ರತಿನಿಧಿಗಳು ಓಡಿಹೋಗುತ್ತಾರೆ. ರೈತರು ತಮ್ಮ ನಾಯಕನನ್ನು ಬಿಡಿಸಿಕೊಂಡು ತಮ್ಮದೇ ಒಂದು ಸರ್ಕಾರ ರಚಿಸಿಕೊಳ್ಳುತ್ತಾರೆ. ಈ ಕಥೆ ಕಯ್ಯೂರಿನ ರೈತರಿಗೆ ಸ್ಪೂರ್ತಿ ಆಗುತ್ತದೆ. ಕಯ್ಯೂರಿನಲ್ಲಿ ಇಬ್ಬರು ಭೂಮಾಲಿಕರಿದ್ದಾರೆ. ಒಬ್ಬರಿಗೊಬ್ಬರಿಗೆ ಆಗುವುದಿಲ್ಲ, ಆದರೆ ರೈತರ ವಿಷಯಕ್ಕೆ ಬಂದರೆ ಅವರಿಬ್ಬರೂ ಒಂದೇ. ಒಬ್ಬ ಭೂಮಾಲಿಕ ಊರಿನ ರೈತರಿಗೆ ಅಕ್ಷರ ಕಲಿಸುವ ದುಸ್ಸಾಹಸ ಮಾಡಿದ ಮಾಸ್ತರನನ್ನು ವಿಚಾರಿಸಿಕೊಳ್ಳಲು ಮನೆಗೆ ಕರೆಸಿರುತ್ತಾನೆ. ಆಗ ಮನೆಯ ಕೆಲಸದವ ಬಂದು ಭೂಮಾಲಿಕ ಕರೆಸಿರುವ ಮತ್ತೊಬ್ಬ ವ್ಯಕ್ತಿ ನೋಡಲು ಬಂದಿರುವುದಾಗಿ ಹೇಳುತ್ತಾನೆ. ’ಇಂದು ಬಿಡುವಿಲ್ಲ, ನಾಳೆ ಬರಲು ಹೇಳು’ ಎಂದು ಅವನು ಆಜ್ಞಾಪಿಸುತ್ತಾನೆ. ’ನಾಳೆ ಯಾವ ವೇಳೆಗೆ’ ಎನ್ನುವ ಪ್ರಶ್ನೆಗೆ ಅವನು ಕೊಡುವ ಉತ್ತರ, ’ಅವನು ಯಾವ ಮಹಾರಾಜನೋ ನಾನು ಸಮಯ ಹೇಳುವುದಕ್ಕೆ, ಬೆಳಗ್ಗೆ ಬಂದು, ಇಲ್ಲಿ ಬಿದ್ದಿರಲು ಹೇಳು’ .. ಇಂತಹ ಸಂಭಾಷಣೆಗಳು ನೋಡುಗರನ್ನು ನಿರ್ದೇಶಿಸದೆ, ಅವರೆದುರು ಅವನ ಕ್ರೌರ್ಯ ಹಾಗು ಅವನು ಪ್ರತಿನಿಧಿಸುವ ವ್ಯವಸ್ಥೆಯ ಮನೋಭಾವವನ್ನು ಬಿಚ್ಚಿಡುತ್ತವೆ.

mrutyunjaya1

ಎರಡೂ ಕತೆಗಳೂ ಜೊತೆಜೊತೆಯಲ್ಲಿಯೇ ಸಾಗುತ್ತವೆ. ಐಗುಪ್ತದಲ್ಲಿ ಒಂದು ಉತ್ಸವದಲ್ಲಿ ಭಾಗವಹಿಸಲೆಂದು ರೈತನಾಯಕ ಮತ್ತು ಅವನ ಸಂಗಡಿಗರನ್ನು ರಾಜಧಾನಿಗೆ ಆಹ್ವಾನಿಸಲಾಗುತ್ತದೆ. ರಾಜನ ಆಹ್ವಾನ, ಬಿಸಿತುಪ್ಪ, ನುಂಗುವ ಧೈರ್ಯವಿಲ್ಲ, ಉಗುಳುವ ದಾರ್ಷ್ಟ್ಯವಿಲ್ಲ. ರಾಜಧಾನಿಗೆ ಬಂದವರನ್ನು ಮಹಲೊಂದರಲ್ಲಿ ಬಂಧಿಸಲಾಗುತ್ತದೆ. ಅವರು ಬಂಧಿಯಾಗಿದ್ದಾರೆ ಎನ್ನುವುದನ್ನು ಕೇವಲ ಚಿಲಕ ಮತ್ತು ಬೀಗ ಜಡಿಯುವ ಸದ್ದಿನಿಂದ ನೋಡುಗರಿಗೆ ದಾಟಿಸುವ ರೀತಿ ಅನನ್ಯ. ಅಲ್ಲಿ ಅವರಿಗೆ ಸಿಗುವ ಹುಚ್ಚನ ಮೂಲಕ ಅವರ ಬಂಧನದ ಹಿನ್ನಲೆ ಮತ್ತು ಐಗುಪ್ತದ ರಾಜಕಾರಣ ಎರಡೂ ವಿವರಿಸಲ್ಪಡುತ್ತದೆ. ಅಲ್ಲಿ ಆಡಳಿತ ನಡೆಸುತ್ತಿರುವುದು ರಾಜನಾದರೂ ಅಧಿಕಾರದ ದಂಡ ಇರುವುದು ಮೂರು ಜನರ ಕೈಯಲ್ಲಿ. ಒಂದು ರಾಜಕಾರಣ – ರಾಜ ಅದರ ಪ್ರತಿನಿಧಿ, ಇನ್ನೊಂದು ಧರ್ಮ ಕಾರಣ – ಧರ್ಮಾಧಿಕಾರಿ ಅದರ ಮುಖವಾಣಿ, ಇವೆರಡರ ಹೊರತಾಗಿಯೂ ಮತ್ತೊಂದು ಶಕ್ತಿ ಕೇಂದ್ರವಿದೆ, ಅದು ಅಲ್ಲಿನ ಭೂಮಾಲಿಕರದ್ದು – ಹಣ ಮತ್ತು ಲಾಭ ಅಲ್ಲಿ ಆಳುತ್ತಿರುತ್ತದೆ. ಏನೆಂದೆ ನಾನು? ಐಗುಪ್ತದ ಅಧಿಕಾರ ದಂಡ ಇರುವುದು ಎಂದು ಹೇಳಿದೆನೆ? ಐಗುಪ್ತವನ್ನು ತೆಗೆದು ಅಲ್ಲಿ ಭಾರತದ ಹೆಸರನ್ನು ನೀವು ಹಾಕಿಕೊಂಡರೂ ಯಾವ ವಿವರಗಳೂ ಬದಲಾಗುವುದಿಲ್ಲ. ಯಾವುದೇ ದೇಶವಿರಲಿ, ಯಾವುದೇ ಕಾಲವಿರಲಿ, ಅಧಿಕಾರದ ದಂಡವಿರುವುದು ರಾಜಕಾರಣಿ, ಧರ್ಮ ಮತ್ತು ವ್ಯಾಪಾರಿ/ಭೂಮಾಲಿಕರ ಕೈಯಲ್ಲಿಯೇ. ಆ ಮಟ್ಟಿಗೆ ಈ ಸತ್ಯ ದೇಶಾತೀತ ಮತ್ತು ಕಾಲಾತೀತ. ಅಲ್ಲಿ ಹೇಗೆ ಭೂಮಾಲಿಕರು ಧರ್ಮಾಧಿಕಾರಿಯನ್ನು, ಧರ್ಮಾಧಿಕಾರಿಯು ರಾಣಿಯ ಮೂಲಕ ರಾಜನನ್ನು ನಿಯಂತ್ರಿಸುತ್ತಾ ಇರುತ್ತಾರೋ ಹಾಗೆ ಕಯ್ಯೂರಿನಲ್ಲಿ ಭೂಮಾಲಿಕರು ಪೋಲೀಸ್ ಮತ್ತು ಅಧಿಕಾರಶಾಹಿಯ ಮೂಲಕ ಕಾನೂನು ವ್ಯವಸ್ಥೆಯನ್ನು ನಿಯಂತ್ರಿಸುತ್ತಾ ಇರುತ್ತಾರೆ.

ನಾಟಕದಲ್ಲಿ ಒಂದು ದೃಶ್ಯ ಬರುತ್ತದೆ. ರಾಜಧಾನಿಗೆ ಬಂದ ಮನೆಪ್ಟಾನನ್ನು ರಾಜ ಔತಣಕ್ಕೆಂದು ಅರಮನೆಗೆ ಕರೆಸಿಕೊಳ್ಳುತ್ತಾನೆ. ಗೇಬುವಿನ ಹೆಂಡತಿ ರಾಜನ ಪ್ರೇಯಸಿ. ರಾಣಿಗೆ ಅದು ಗೊತ್ತು. ಅವಳು ಗೇಬುವಿನ ಹೆಂಡತಿಯನ್ನು ಹಂಗಿಸುತ್ತಿರುತ್ತಾಳೆ. ಅವಳು ಅದನ್ನು ವಿಧಿಯಿಲ್ಲದೆ ತಡೆದುಕೊಂಡಿರುತ್ತಾಳೆ. ಅಷ್ಟರಲ್ಲಿ ರಾಜನ ಬರುವಿನ ಘೋಷಣೆ ಆಗುತ್ತದೆ. ಆ ಕೂಡಲೇ ಆಕೆಯ ಇಡೀ ಮೈಮಾಟದಲ್ಲಿ, ಹಾವಭಾವದಲ್ಲಿ ಒಂದು ಬದಲಾವಣೆ ಕಾಣುತ್ತದೆ. ರಾಜನನ್ನು ನಾನು ಮಣಿಸಬಲ್ಲೆ ಎನ್ನುವ ಧಿಮಾಕಿದೆ ಅವಳಲ್ಲಿ, ರಾಣಿ ರಾಜನ ಮುಂದೆ ತನ್ನನ್ನು ಏನೂ ಅನ್ನಲಾರಳು ಎನ್ನುವ ಧೈರ್ಯವಿದೆ, ಇವೆಲ್ಲಕ್ಕೂ ಮೀರಿ ಅವಳು ತನ್ನ ಹೆಣ್ತನವನ್ನು ಪ್ರದರ್ಶಿಸುವ ಒನಪಿದೆ ಅಲ್ಲಿ. ಆ ದೃಶ್ಯದ ಸಂಯೋಜನೆ, ರಾಣಿ ಮತ್ತು ಅವಳ ಅಲಂಕಾರ, ಊಟದ ಮೇಜಿನ ಎರಡೂ ದಿಕ್ಕಿಗೂ ಹಚ್ಚಿಡುವ ದೈತ್ಯಾಕಾರದ ಮೇಣದ ಬತ್ತಿ ಎಲ್ಲವೂ ಇಡೀ ದೃಶ್ಯವನ್ನು ಒಂದು ಚಿತ್ರಪಟದಂತೆ ಕಟ್ಟಿ ನಿಲ್ಲಿಸುತ್ತದೆ.

ಅಂತಹದೇ ಇನ್ನೊಂದು ದೃಶ್ಯ : ರಾಣಿ ಧರ್ಮಾಧಿಕಾರಿಯನ್ನು ಭೇಟಿ ಮಾಡಲು ಹೋಗುತ್ತಾಳೆ. ಅವರಿಬ್ಬರ ನಡುವೆ ಅಕ್ರಮ ಸಂಬಂಧವಿದೆ. ಅದನ್ನು ಪ್ರೇಕ್ಷಕರಿಗೆ ತಿಳಿಯ ಪಡಿಸಲು ನಿರ್ದೇಶಕರು ಬಳಸುವುದು ಕೇವಲ ಕೆಲವು ಸ್ವರಗಳು. ಹೌದು ನಾಲ್ಕೈದು ಸ್ವರಗಳ ಸಂಗೀತದ ಗುನುಗುನುವಿಕೆ ಅವರಿಬ್ಬರ ಸಂಬಂಧದ ಇನ್ನೊಂದು ನೆಲೆಯನ್ನು ಅತ್ಯಂತ ನವಿರಾಗಿ ನಮಗೆ ಹೇಳಿಬಿಡುತ್ತದೆ. ಆ ದೃಶ್ಯದ ಕೊನೆಯಲ್ಲಿ ರಾಣಿ ಮತ್ತು ಧರ್ಮಾಧಿಕಾರಿ ಕೈಗಳನ್ನು ಸ್ಪರ್ಶಿಸುತ್ತಾರೆ. ಅದರ ಹೊರತಾಗಿಯೂ ಅಥವಾ ಅದಕ್ಕಿಂತಲೂ ತೀವ್ರವಾಗಿ ಈ ಹಮ್ಮಿಂಗ್ ಅವರಿಬ್ಬರ ಸಂಬಂಧದ ಉತ್ಕಟತೆಯನ್ನು ಕಟ್ಟಿಕೊಟ್ಟುಬಿಡುತ್ತದೆ.

ಇವು ಕೇವಲ ಎರದು ಉದಾಹರಣೆಗಳು ಮಾತ್ರವೇ. ಸಣ್ಣ ಸಣ್ಣ ವಿವರಗಳು, ಪಾತ್ರಗಳ ಮುಖಭಾವ, ಸಂಗೀತ ಹೇಗೆ ಕಥೆಯನ್ನು ನಾಟಕವಾಗಿಸಬಲ್ಲವು ಎಂದು ತೋರಿಸುವ ಉದಾಹರಣೆಗಳು.
ಕಡೆಯಲ್ಲಿ ನ್ಯಾಯಾಲಯದ ಅಣುಕು ದೃಶ್ಯ : ಐಗುಪ್ತದಲ್ಲಿ ತೀರ್ಪು ಏನು ಎನ್ನುವುದು ನ್ಯಾಯಸಭೆಯ ಮೊದಲೇ ನಿರ್ಧಾರವಾಗಿರುತ್ತದೆ, ರಾಜ, ಮಂತ್ರಿ ಮತ್ತು ಧರ್ಮಾಧಿಕಾರಿಯ ಎದುರಿನಲ್ಲಿ ರೈತನಾಯಕೆ ತನ್ನ ಮೇಲೆ ಹೊರೆಸಲಾಗಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಸಿದ್ಧಪಡಿಸಿ ತೋರಿಸುತ್ತಾನೆ. ಆದರೆ ಆ ನ್ಯಾಯಾಲಯದಲ್ಲಿ ನೀರಾನೆ ಪ್ರಾಂತ್ಯದ ರೈತ ದಂಗೆ ಆರೋಪವಾಗಿ ಕಂಡರೂ ಅದರ ಹಿಂದಿನ ಲೆಕ್ಕಾಚಾರಗಳೇ ಬೇರೆ ಇರುತ್ತದೆ. ಭೂಮಾಲಿಕರಿಗೆ ನೀರಾನೆ ಪ್ರಾಂತ್ಯದಲ್ಲಾದದ್ದು ಇನ್ನೆಲ್ಲೂ ಮರುಕಳಿಸದಿರಲಿ ಎನ್ನುವ ಎಚ್ಚರ ಇದ್ದರೆ, ಧರ್ಮಾಧಿಕಾರಿಗೆ ಆ ಮೂಲಕ ತನ್ನ ಹಿಂಬಾಲಕರನ್ನು ತೃಪ್ತಿಪಡಿಸಿ, ಮಹಾಮಂತ್ರಿಯ ಬಲವನ್ನು ಕಡಿಮೆ ಮಾಡಬೇಕು, ತನ್ನ ಪ್ರೇಯಸಿ ಮಹಾರಾಣಿಯ ಇಚ್ಛೆಯಂತೆ ರಾಜಕುಮಾರನಿಗೆ ಪಟ್ಟಕಟ್ಟಿ ಆ ಮೂಲಕ ತನ್ನ ಬಲ ಹೆಚ್ಚಿಸಿಕೊಳ್ಳಬೇಕು ಎನ್ನುವ ಹಂಬಲ, ರಾಣಿಗೆ ತನ್ನ ಮಗನನ್ನು ಯುವರಾಜನನ್ನಾಗಿ ಮಾಡಿ ಆ ಮೂಲಕ ತಾನು ಅಧಿಕಾರವನ್ನು ಕೈಮುಷ್ಟಿಯಲ್ಲಿ ಹಿಡಿದುಕೊಳ್ಳುವ ಬಯಕೆ… ಹೀಗೆ ಏನೇನೋ ಲೆಕ್ಕಾಚಾರಗಳು. ಇಲ್ಲಿ ಮನೆಪ್ಟಾ ಒಂದು ಪಗಡೆಯ ಕಾಯಿ ಅಷ್ಟೇ.

ವಿಚಾರಣೆಯ ನಾಟಕ ಮುಗಿದು, ರಾಣಿ ಮನೆಪ್ಟಾನಿಗೆ ಶಿರಚ್ಛೇಧದ ಶಿಕ್ಷೆ ವಿಧಿಸುತ್ತಾಳೆ. ಬೆಳಕು ಮಂಕಾಗುತ್ತದೆ, ಪೂರ್ತಿ ನಂದುವುದಿಲ್ಲ. ಆ ಬೆಳಕಿನಲ್ಲಿ ರಾಣಿಯ ವೇಷಭೂಷ ನಾವು ಕಾಣುವಂತೆಯೇ ಬದಲಾಗುತ್ತದೆ. ಅದೇ ರಾಣಿ ಈಗ ಕೈಯ್ಯೂರಿನ ನ್ಯಾಯಾಲಯದಲ್ಲಿ ನ್ಯಾಯಾಧೀಶೆ. ಹೌದು ವೇಷಭೂಷಣ ಮಾತ್ರ ಬದಲಾಗುತ್ತದೆ. ಅಧಿಕಾರದ ಭಾಷೆ ಬದಲಾಗುವುದಿಲ್ಲ, ಪಟ್ಟುಗಳು ಬದಲಾಗುವುದಿಲ್ಲ. ಇಲ್ಲೂ ಸಹ ಚಿರಕಂಡ, ಅಬೂಬಕರ್ ಮತ್ತು ಗೆಳೆಯರಿಗೆ ವಿಚಾರಣೆಯ ನಾಟಕದ ನಂತರ ಗಲ್ಲುಶಿಕ್ಷೆ ವಿಧಿಸಲಾಗುತ್ತದೆ. ಅವರ ವಿರುದ್ಧದ ಯಾವ ಅಪರಾಧಗಳೂ ಸಾಬೀತಾಗದೆ ಇದ್ದರೂ…

ಈಗ ರಂಗshripad bhat2ದ ಮೇಲೆ ಎರಡು ನೇಣಿನ ಕುಣಿಕೆಗಳು : ಒಂದು ಮನೆಪ್ಟಾನಿಗೆ ಮತ್ತೊಂದು ಕಯ್ಯೂರಿನ ರೈತನಿಗೆ… ಇಲ್ಲ ಎರಡಲ್ಲ… ನನಗೆ ಅಲ್ಲಿ ಇನ್ನೊಂದು ಕುಣಿಕೆ ಕಾಣಿಸಿತು, ಅದು ವೇಮಲನ ಕೊರಳನ್ನು ಬಿಗಿದಿದ್ದ ಕುಣಿಕೆ… ಯಾಕೋ ಮನಸ್ಸು ಭಾರವಾಗುತ್ತಿತ್ತು. ಹಿನ್ನಲೆಯಲ್ಲಿ ನ್ಯಾಯಾಧಿಶೆ ಮತ್ತೊಮ್ಮೆ ರೂಪ ಬದಲಿಸುತ್ತಿದ್ದಳು… ತಂಪು ಕನ್ನಡಕ, ಬಿಳುಪು ಬಣ್ಣ, ಎತ್ತರದ ನಿಲುವು, ಹಿನ್ನಲೆಯಲ್ಲಿ ರಣಹದ್ದುಗಳ ಕೇಕೆ…. ಅವಳು ಹದ್ದಾಗಿದ್ದಳು..

ನಾಟಕ ಇಲ್ಲಿಗೆ ಮುಗಿಯ ಬೇಕಾಗಿತ್ತು, ಹಾಗೆ ಮುಗಿದಿದ್ದರೆ ಅದು ಕೇವಲ ಒಂದು ನೋವಿನ ಕಥೆಯನ್ನು ಮಾತ್ರ ಹೇಳುತ್ತಿತ್ತು. ಅದರೆ ಅದು ಹಾಗಾಗಲಿಲ್ಲ. ರಂಗದ ಒಂದು ತುದಿಯಿಂದ ಇನ್ನೊಂದು ತುದಿಗೆ ನಿಧಾನವಾಗಿ ಒಂದು ಕೆಂಪಿನ ಮಹಾಪೂರ ಹರಿಯತೊಡಗುತ್ತದೆ. ನಂತರ ಒಬ್ಬರ ಹಿಂದೊಬ್ಬರು, ಅವರ ಹಿಂದೆ ಇನ್ನೊಬ್ಬರು, ಅವರ ಹಿಂದೆ ಮತ್ತೊಬ್ಬರು ಕೆಂಪು ಬಾವುಟವನ್ನು ಹಿಡಿದು ಧಡ ಧಡ ದಾಪುಗಾಲಿಟ್ಟು ಬರುತ್ತಿರುತ್ತಾರೆ, ರಂಗದ ಒಂದು ತುದಿಯಿಂದ ಇನ್ನೊಂದು ತುದಿಗೆ. ಅನ್ಯಾಯದ ಒಂದು ಹತ್ಯೆ ಹೇಗೆ ಇನ್ನೂ ನೂರು ಜನರನ್ನು ಹೋರಾಟದ ಹಾದಿಗೆ ಕರೆತರುತ್ತದೆ ಎನ್ನುವುದು ಕಡೆಯ ದೃಶ್ಯದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಅದೇ ಪಾತ್ರಧಾರಿಗಳು, ಅಷ್ಟೇ ಪಾತ್ರಧಾರಿಗಳು ಒಬ್ಬರ ಹಿಂದೆ ಮತ್ತೊಬ್ಬರು ಐದಾರು ಸಲ ರಂಗದ ಎಡಗಡೆಯಿಂದ ರಂಗವನ್ನು ಪ್ರವೇಶಿಸಿ, ರಂಗದುದ್ದಕ್ಕೂ ನಡೆದು, ರಂಗದ ಬಲಗಡೆಯಿಂದ ನಿಷ್ಕ್ರಮಿಸಿ, ಹಿಂಬಾಗದಲ್ಲಿ ಓಡಿ, ಮತ್ತೆ ಎಡಗಡೆಯಿಂದ ರಂಗವನ್ನು ಪ್ರವೇಶಿಸುತ್ತಾರೆ, ಎಲ್ಲೂ ತೆರಪಿಲ್ಲದೆ. ಅದೊಂದು ಪ್ರತಿಭಟನೆಯ ಮಹಾಪೂರ. ಕಡೆಯಲ್ಲಿ ಆ ಪಾತ್ರಗಳು ಕೆಂಪು ಧ್ವಜವನ್ನು ಹಿಡಿದು, ಥೇಟ್ ಚಿರಸ್ಮರಣೆಯ ಪಾತ್ರಗಳಂತೆ ಫ್ರೀಜ್ ಆಗಿ ನಾಟಕ ಮುಗಿಯುತ್ತದೆ.

ಎರಡೂ ಕಥೆಗಳನ್ನೂ ಶ್ರೀಪಾದಭಟ್ ಅವರು ಒಂದುಗೂಡಿಸಿರುವ ತಂತ್ರದಲ್ಲಿ, ಕುಸುರಿಯಲ್ಲಿ ಅವರ ಕಸುಬುದಾರಿಕೆ ಮನಸ್ಸೆಳೆಯುತ್ತದೆ. ಒಂದು ದೃಶ್ಯದಿಂದ ಇನ್ನೊಂದು ದೃಶ್ಯಕ್ಕೆ, ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಎಲ್ಲೂ ಜರ್ಕ್ ಗಳಿಲ್ಲ, ಸರಾಗವಾಗಿ ಕಾಲ ಮತ್ತು ದೇಶ ಪಲ್ಲಟವಾಗುತ್ತಿರುತ್ತದೆ. ಫೆರೋಗಳ ಕಾಲದ ಕಥೆ ಹೇಳುವಾಗ ರಂಗ ಸಜ್ಜಿಕೆಯಲ್ಲಿ ಕಂಡು ಬರುವ ವೈಭವ ಮತ್ತು ಕಯ್ಯೂರಿನ ಕಥೆಯಲ್ಲಿ ಬರುವ ಸಾಮಾಜಿಕ ಕಥೆಯ ಚಿತ್ರಣ ಎರಡಕ್ಕೂ ಇರುವ ಭಿನ್ನತೆ ಅತ್ಯಂತ ಸಹಜವಾಗಿ ಅವೇ ಸಲಕರಣೆಗಳೊಂದಿಗೆ ಮೂಡಿ ಬರುತ್ತದೆ. ಅದು ನೋಡುಗರನ್ನು ಕಾಲ ಮತ್ತು ದೇಶಗಳಿಗೆ ಅಣಿಗೊಳಿಸುತ್ತದೆ. ನಾಟಕದ ಧನಾತ್ಮಕ ಅಂಶವೆಂದರೆ ಅದರ ರಂಗಸಜ್ಜಿಕೆ. ಸಿಂಹಾಸನ, ರಾಜನ ಪಲ್ಲಕ್ಕಿ, ಭೂಮಾಲಿಕರ ದಿವಾನ್ ಎಲ್ಲವೂ ನಮ್ಮ ಕಣ್ಣೆದುರಲ್ಲೇ ಚಕ ಚಕ ಎಂದು ಬದಲಾಗುತ್ತಿರುತ್ತದೆ. ಅಲ್ಲಿ ಎಲ್ಲಿಯೂ ಅನಗತ್ಯವಾದ ಅತಿ ಕಾಣಿಸಿಕೊಂಡಿಲ್ಲ. ಎರಡೂ ಕಾಲಕ್ಕೂ ಹೊಂದುವ ರೀತಿಯಲ್ಲಿ ಹಿನ್ನಲೆ ಮತ್ತು ಧ್ವಜಗಳು ಬಳಕೆ ಆಗಿವೆ. ಕಥೆ ಹೇಳುವ ತಂತ್ರದ ಭಾಗವಾಗಿ ಪಾತ್ರಧಾರಿಗಳೇ ಸೂತ್ರಧಾರಿಗಳಾಗಿ ಬದಲಾಗುವ ವಿಧಾನ ನಿರೂಪಣೆಗೆ ಒಂದು ವೇಗ ಒದಗಿಸಿದೆ.

ಎಂ ಎಸ್ ಸತ್ಯು ಅವರ ರಂಗವಿನ್ಯಾಸ, ದಾಮೋದರ ನಾಯ್ಕರ ರಂಗಸಜ್ಜಿಕೆ ಅದ್ಭುತವಾಗಿದೆ. ನಾಟಕವನ್ನು ಒಂದು ದೃಶ್ಯಕಾವ್ಯವನ್ನಾಗಿಸುವ ದಿಸೆಯಲ್ಲಿ ಇವೆರಡರ ಜೊತೆಯಲ್ಲಿ ವಿನಯಚಂದ್ರ ಅವರ ಬೆಳಕಿನ ವಿನ್ಯಾಸದ ಕೊಡುಗೆ ಗಣನೀಯವಾದುದು. ಸಂಗೀತ ಬಿಟ್ ಗಳಾಗಿ ಕೆಲವು ಪರಿಣಾಮಕಾರಿ ಹೊಳಹುಗಳನ್ನು ಕೊಟ್ಟರೂ ಒಟ್ಟಾರೆ ನಾಟಕವನ್ನು ಗಣನೆಗೆ ತೆಗೆದುಕೊಂಡರೆ ಅದರ ಪರಿಣಾಮ ಕಡಿಮೆ ಎಂದೇ ತೋರುತ್ತದೆ. ಕಾಲ ದೇಶಗಳ ಪಲ್ಲಟವನ್ನು ತೋರುವಲ್ಲಿ ಎರಡು ಭಿನ್ನ ಸಂಪ್ರದಾಯವನ್ನು ಸಂಗೀತದ ಮೂಲಕ ಕಟ್ಟಿಕೊಡುವ ಸಾಧ್ಯತೆಯನ್ನು ಬಳಸಿಕೊಳ್ಳಬಹುದಿತ್ತು ಎನ್ನಿಸುತ್ತದೆ. ಪಾತ್ರಧಾರಿಗಳೆಲ್ಲರೂ ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ತಮ್ಮ ಪಾತ್ರಗಳನ್ನು ಕಟ್ಟಿಕೊಟ್ಟಿದ್ದಾರೆ. ಆ ಬಗ್ಗೆ ಎರಡು ಮಾತಿಲ್ಲ. ಯಾರೇ ಒಬ್ಬರನ್ನು ಹೆಸರಿಸಿದರೂ ಅದು ಇನ್ನೊಬ್ಬ ಪಾತ್ರಧಾರಿಗೆ ಅನ್ಯಾಯ ಮಾಡಿದಂತೆ ಎನ್ನುವಂತೆ ಎಲ್ಲರೂ ಪರಿಣಾಮಕಾರಿಯಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಿರ್ದೇಶಕ ಶ್ರೀಪಾದಭಟ್ಟರ ಬಗ್ಗೆ ಹೆಚ್ಚಿಗೆ ಹೇಳುವುದೇನು, ನಿನ್ನೆಗಳನ್ನು ಇಂದಿನ ಜೊತೆ ಮುಖಾಮುಖಿಯಾಗಿಸಿ, ನಿನ್ನೆಗಳ ಹೋರಾಟವನ್ನು ಇಂದಿಗೂ ವಿಸ್ತರಿಸಿ ಅವರು ಮತ್ತೊಂದು ಮಾತಾಡುವ ಚಿತ್ರಗಳನ್ನು ಜೋಡಿಸಿಕೊಟ್ಟ ಪಯಣವನ್ನು ಕಟ್ಟಿಕೊಟ್ಟಿದ್ದಾರೆ. ಅವರ ಕಲಾವಂತಿಕೆಗೆ ಶರಣು. ’ಕಾವ್ಯರಂಗ’ ಮತ್ತು ’ಮೃತ್ಯುಂಜಯ’ ನಾಟಕಗಳನ್ನು ನಮ್ಮೆದಿರು ತಂದು ನಿಲ್ಲಿಸಿದ ಸಮುದಾಯ ರೆಪರ್ಟರಿಗೆ ಒಂದು ಸಲಾಂ.

ಫೋಟೋಗಳು: ಕಿರಣ್ ಭಟ್ / ವಿನಯ ಚಂದ್ರ ಪಿ

Advertisements

One response to “ನಾಟಕ ಇಲ್ಲಿಗೆ ಮುಗಿಯ ಬೇಕಾಗಿತ್ತು, ಅದರೆ ಅದು ಹಾಗಾಗಲಿಲ್ಲ..

  1. ನಮ್ಮ ಸುತ್ತಲಿನ ಪರಿಸರ ಻ಸಹಿಷ್ಣುತೆಯಿಂದ ಬಗ್ಗಡಗೊಳ್ಳುತ್ತಿರುವ ಹೊತ್ತಿನಲ್ಲಿ ಸಮುದಾಯ ತನ್ನ ಸಾಮಾಜಿಕ ಬದ್ಧತೆಗೆ ಅನುಗುಣವಾಗಿ ನಡೆಸಿದ ‘ಬಿಡುಗಡೆಯ ರಂಗ ಸಂಚಾರ’ಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಜನ ಪ್ರೀತಿಯಿಂದ ಸ್ವಾಗತಿಸಿದ್ದಾರೆ, ಅಭಿಮಾನದಿಂದ ಬರಮಾಡಿಕೊಂಡು ನಾಟಕ, ಕಾವ್ಯರಂಗ ಗಳನ್ನು ನೋಡಿ ಬೆಂಬಲಿಸಿದ್ದಾರೆ. ಕಾವ್ಯರಂಗ ಕ್ಕೆ ವಿದ್ಯಾರ್ಥಿಗಳಿಂದ ಸಿಕ್ಕ ಮೆಚ್ಚುಗೆ ಪ್ರಶಂಸೆ ಮತ್ತು ಬೇಡಿಕೆ ರಂಗ ಭೂಮಿಯ ಹೊಸ ಸಾಧ್ಯತೆಗಳ ಬಗ್ಗೆ ಭರವಸೆ ಕೊಟ್ಟಿದೆ. ಕರ್ನಾಟಕದ ಸಹೃದಯೀ ಜನರಿಗೆ ಧನ್ಯವಾದಗಳನ್ನು ಹೇಳಲೇ ಬೇಕು. ಜೊತೆಗೆ ಈ ಸಂಚಾರದ ಕಲಾವಿದರಿಗೆ ಅನಂತಾನಂತ ಅಭಿನಂದನೆಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s